Index   ವಚನ - 889    Search  
 
ಅಂಗ ಲಿಂಗಕ್ಕೆ ಭಾಜನರೆಂಬರು, ಅಂಗ ಲಿಂಗಕ್ಕೆ ಭಾಜನವಲ್ಲ. ಕಾಯಗುಣಂಗಳ ಕಳೆದುಳಿದು, ಮಾಯಾಮಲವ ಹಿಂಗಿಸಿ, ಮನವೆಂಬ ಘನಪರಿಯಾಣವ ಬೆಳಗಿ, ಸಕಲ ಇಂದ್ರಿಯಗಳೆಂಬ ಕೆಲವಟ್ಟಲವನಳವಡಿಸಿ, ಜ್ಞಾನಪ್ರಕಾಶವೆಂಬ ದೀಪಸ್ತಂಭ ಬೆಳಗಿ, ಷಡಾಧಾರಚಕ್ರವೆಂಬ ಅಡ್ಡಣಿಗೆಯನಿಟ್ಟು, ಸಕಲಕಾರಣಂಗಳೆಂಬ ಮೇಲುಸಾಧನಂಗಳ ಹಿಡಿದು, ಸದ್ಭಕ್ತ್ಯಾನಂದವೆಂಬ ಬೋನವ ಬಡಿಸಿ, ವಿನಯ ವಿವೇಕವೆಂಬ ಅಭಿಘಾರವ ಗಡಣಿಸಿ ಪ್ರಸನ್ನ ಪರಿಣಾಮದ ಮಹಾರುಚಿಯೆಂಬ ಚಿಲುಪಾಲಘಟ್ಟಿಯ ತಂದಿಳುಹಿ, ಸುಚಿತ್ತ ಸುಯಿಧಾನದಿಂದ, ನಿಮ್ಮ ಹಸ್ತದ ಅವಧಾನವೆ ಅನುವಾಗಿ, ಬಸವಣ್ಣನೆ ಬೋನ ನಾನೆ ಪದಾರ್ಥವಾಗಿ ನಿಮ್ಮ ಪರಿಯಾಣಕ್ಕೆ ನಿವೇದಿಸಿದೆನು. ಆರೋಗಣೆಯ ಮಾಡಯ್ಯಾ, ಕೂಡಲಚೆನ್ನಸಂಗಮದೇವಾ.