Index   ವಚನ - 915    Search  
 
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂಬ ಹುಚ್ಚರ ನಾನೇನೆಂಬೆನಯ್ಯಾ. ಲಿಂಗದ ಹವಣನರಿಯದೆ ತನ್ನ ಒಡಲ ಹವಣಿಂಗೆ ಗಡಣಿಸಿಕೊಂಬ ದುರಾತ್ಮರನೇನೆಂಬೆನಯ್ಯಾ. ತನ್ನ ಒಡಲ ಹವಣಿಂಗೆ ಮನವು ಸಾಕೆಂದು ತೃಪ್ತಿಯಾದುದು ಲಿಂಗಾರ್ಪಿತಕ್ಕೆ ಅದು ಸಲುವುದೆ, ಹೇಳಿರೆ? ಆ ಲಿಂಗವು ಮುಟ್ಟದ ಅನರ್ಪಿತವನುಂಡು ಅಚ್ಚಪ್ರಸಾದಿಗಳೆನಿಸಿಕೊಂಬವರ ಲಿಂಗದಲ್ಲಿ ಸಜ್ಜನ ಸನ್ನಹಿತ ಶರಣರು ಮೆಚ್ಚುವರೆ? ಬಂದ ಬಂದ ಸಕಲ ಪದಾರ್ಥಗಳೆಲ್ಲವ ಲಿಂಗಕ್ಕೆ ಅರ್ಪಿಸಿಕೊಳ್ಳಬಲ್ಲಡೆ ಕೂಡಲಚನ್ನಸಂಗಯ್ಯನಲ್ಲಿ ಆತನೆ ಅಚ್ಚಪ್ರಸಾದಿ.