Index   ವಚನ - 927    Search  
 
ಅನಂತ ಅದ್ಭುತ ತಮಂಧ ತಾರಜ ತಂಡಜ ಭಿನ್ನಜ ಭಿನ್ನಾಯುಕ್ತ ಅದ್ಭೂತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ ಇಂತೀ ಹದಿನೆಂಟು ಯುಗಂಗಳಲ್ಲಿ ಪುಟ್ಟಿದವಾವೆಂದಡೆ: ಅನಂತವೆಂಬ ಯುಗದಲ್ಲಿ ಸಾಕ್ಷಾತ್ ಸರ್ವಜ್ಞ ತಾನೊಬ್ಬನೆ ಇದ್ದ. ಅದ್ಭುತವೆಂಬ ಯುಗದಲ್ಲಿ ಪಾರ್ವತಿ ಹುಟ್ಟಿದಳು. ತಮಂಧವೆಂಬ ಯುಗದಲ್ಲಿ ನಾರಾಯಣ ಪುಟ್ಟಿದನು. ಆ ನಾರಾಯಣನ ನಾಭಿಯಲ್ಲಿ ಒಂದು ಕಮಲ ಹುಟ್ಟಿತ್ತು. ಆ ಕಮಲದಲ್ಲಿ ಬ್ರಹ್ಮ ಹುಟ್ಟಿದನು. ತಾರಜವೆಂಬ ಯುಗದಲ್ಲಿ ಆ ಬ್ರಹ್ಮಂಗೆ ಅಜನೆಂಬ ಹೆಸರಾಯಿತ್ತು. ತಂಡಜವೆಂಬ ಯುಗದಲ್ಲಿ ಬ್ರಹ್ಮಾಂಡವೆಂಬುದೊಂದು ತತ್ತಿ ಪುಟ್ಟಿತ್ತು. ಭಿನ್ನಜವೆಂಬ ಯುಗದಲ್ಲಿ ಆ ತತ್ತಿ ಭಿನ್ನವಾಯಿತ್ತು. ಭಿನ್ನಾಯುಕ್ತವೆಂಬ ಯುಗದಲ್ಲಿ ಮೇಘ ಪಾರಿಜಾತಂಗಳು ಪುಟ್ಟಿದವು. ನಿಂದಲ್ಲಿ ಭೂಮಿ ಪುಟ್ಟಿತ್ತು. ಅದ್ಭೂತವೆಂಬ ಯುಗದಲ್ಲಿ ಅಷ್ಟ ಕುಲಪರ್ವತಂಗಳು ಪುಟ್ಟಿದುವು. ಅಮದಾಯುಕ್ತವೆಂಬ ಯುಗದಲ್ಲಿ ಸಪ್ತಸಮುದ್ರಂಗಳು ಪುಟ್ಟಿದುವು. ಮಣಿರಣವೆಂಬ ಯುಗದಲ್ಲಿ ಉತ್ತಮ ಮಧ್ಯಮ ಕನಿಷ್ಠಂಗಳು ಪುಟ್ಟಿದುವು. ಮಾನ್ಯರಣವೆಂಬ ಯುಗದಲ್ಲಿ ನಕ್ಷತ್ರಂಗಳಾಗಿರ್ದ ಚೌರಾಸೀತಿ ಲಕ್ಷಣ ಜೀವರಾಶಿಗಳು ಪುಟ್ಟಿದುವು. ವಿಶ್ವಾರಣವೆಂಬ ಯುಗದಲ್ಲಿ ಚಂದ್ರ ಸೂರ್ಯರು ಪುಟ್ಟಿದರು. ವಿಶ್ವಾವಸುವೆಂಬ ಯುಗದಲ್ಲಿ ದೇವಾದಿ ದೇವರ್ಕಳು ಪುಟ್ಟಿದರು. ಅಲಂಕೃತವೆಂಬ ಯುಗದಲ್ಲಿ ಕಾಮಾದಿವರಂಗಳು ಪುಟ್ಟಿದುವು ಕೃತಯುಗದಲ್ಲಿ ದೇವ ದಾನವ ಮಾನವರಿಗೆ ಯುದ್ಧವಾಯಿತ್ತು. ತ್ರೇತಾಯುಗದಲ್ಲಿ ರಾಮರಾವಣರಿಗೆ ಯುದ್ಧವಾಯಿತ್ತು. ದ್ವಾಪರಯುಗದಲ್ಲಿ ಕೌರವ ಪಾಂಡವರಿಗೆ ಯುದ್ಧವಾಯಿತ್ತು. ಕಲಿಯುಗದಲ್ಲಿ ಮೌರಿಯ ಕದಂಬರಿಗೆ ಯುದ್ಧವಾಯಿತ್ತು. ಇಂತೀ ಹದಿನೆಂಟು ಯುಗಂಗಳಲ್ಲಿ ರಾಜ್ಯವನಾಳಿದ ಸೂರ್ಯವಂಶದ ಕ್ಷತ್ರಿಯರ ಹೆಸರಾವುವೆಂದಡೆ ಆದಿನಾರಾಯಣ, ಆದಿನಾರಾಯಣನ ಮಗ ಬ್ರಹ್ಮ, ಬ್ರಹ್ಮನ ಮಗ ಭೃಗು, ಭೃಗುವಿನ ಮಗ ಇಂದ್ರ, ಇಂದ್ರನ ಮಗ ನಯನೇಂದ್ರಿಯ, ನಯನೇಂದ್ರಿಯನ ಮಗ ಕಾಲಸ್ವಾಲ, ಕಾಲಸ್ವಾಲನ ಮಗ ದುಂದುಮಹಂತ, ದುಂದುಮಹಂತನ ಮಗ ತ್ರಿಶಂಕು, ತ್ರಿಶಂಕುವಿನ ಮಗ ಹರಿಶ್ಚಂದ್ರ, ಹರಿಶ್ಚಂದ್ರನ ಮಗ ಲೋಹಿತಾಕ್ಷ, ಲೋಹಿತಾಕ್ಷನ ಮಗ ನಳ, ನಳನ ಮಗ ಕೂರ್ಪಸ್ಯ, ಕೂರ್ಪಸ್ಯನ ಮಗ ಪುನೋರಪಿ, ಪುನೋರಪಿಯ ಮಗ ಪರಿತಾಸಿ, ಪರಿತಾಸಿಯ ಮಗ ಅಮರ, ಅಮರನ ಮಗ ಮಾಂಧಾತ, ಮಾಂಧಾತನ ಮಗ ಮಾಗ್ರೀಚ, ಮಾಗ್ರೀಚನ ಮಗ ಬಿಂದು, ಬಿಂದುವಿನ ಮಗ ಲವಲ, ಲವಲನ ಮಗ ಪರಿತಾಪಿ, ಪರಿತಾಪಿಯ ಮಗ ಸಿಳ್ಳಗೋಪಾಲ, ಸಿಳ್ಳಗೋಪಾಲನ ಮಗ ನಂದಗೋಪಾಲ, ನಂದಗೋಪಾಲನ ಮಗ ವಸುದೇವ, ವಸುದೇವನ ಮಗ ಶ್ರೀಕೃಷ್ಣ, ಶ್ರೀಕೃಷ್ಣನ ಮಗ ಸಿಳಪ್ಪ, ಸಿಳಪ್ಪನ ಮಗ ದಿಗು, ದಿಗುವಿನ ಮಗ ರಘು, ರಘುವಿನ ಮಗ ಅರಣ್ಯ, ಅರಣ್ಯನ ಮಗ ಮೃಗರಾಜ, ಮೃಗರಾಜನ ಮಗ ದಶರಥ, ದಶರಥನ ಮಗ ರಾಮ. ಇಂತಿವರೆಲ್ಲರೂ ಪ್ರಳಯಕ್ಕೊಳಗಾದರು ನೋಡಿರೆ! ಪ್ರಳಯರಹಿತ ನಮ್ಮ ಸಂಗನಬಸವಣ್ಣ ಕೂಡಲಚೆನ್ನಸಂಗಮದೇವರು ತಾನು ತಾನಾಗಿರ್ದರು.