Index   ವಚನ - 993    Search  
 
ಆಚಾರವಡಗಿತ್ತು ಅನಾಚಾರವೆದ್ದಿತ್ತು. ಅಲ್ಲದೆ ನಡೆಯ ನಡದಾರು ಸಲ್ಲದಚ್ಚುಗಳ ಮರಳಿವೊತ್ತಿಯಾರು. ಭಕ್ತನೆ ಹೊಲೆಯನಾದಾನು, ಜಂಗಮವೆ ಅನಾಚಾರಿಯಾದಾನು. ಲಂಡ ಭಕ್ತನಾದಾನು ಪುಂಡ ಜಂಗಮವಾದೀತು. ಲಂಡ ಪುಂಡ ಕೂಡಿ ಜಗಭಂಡರಾಗಿ ಕೆಟ್ಟಾರು. ಮನದ ಹಿರಿಯರ ಬಿಟ್ಟಾರು, ಕುಲದ ಹಿರಿಯರ ಪೂಜಿಸಿಯಾರು. ಹದಿನೆಂಟು ಜಾತಿಯೆಲ್ಲ ಕೂಡಿ ಒಂದೆ ತಳಿಗೆಯಲ್ಲಿ ಉಂಡಾರು. ಮತ್ತೆ ಕುಲಕ್ಕೆ ಹೋರಿಯಾಡಿಯಾರು, ಗುರುವ ನರನೆಂದಾರು. ಲಿಂಗವ ಶಿಲೆಯೆಂದಾರು, ಜಂಗಮವ ಜಾತಿವಿಡಿದು ನುಡಿದಾರು. ಭಕ್ತ ಜಂಗಮ ಪ್ರಸಾದವನೆಂಜಲೆಂದತಿಗಳೆದಾರು, ತೊತ್ತು ಸೂಳೆಯರೆಂಜಲ ತಿಂದಾರು. ಮತ್ತೆ ನಾ ಘನ ತಾ ಘನವೆಂದಾರು, ಒತ್ತಿದಚ್ಚುಗಳು ಹುತ್ತೇರಿ ಹುಳಿತಾವು. ಅಷ್ಟರೊಳಗೆ ಶರಣರು ಪುಟ್ಟಿ ಸಂಹಾರವ ಮಾಡಿಯಾರು, ಹೊಟ್ಟು ಹಾರೀತು, ಘಟ್ಟಿಯುಳಿದೀತು. ಮಿಕ್ಕಿದ್ದು ಪಲ್ಲವಿಸೀತು ಮರ್ತ್ಯವೇ ಕೈಲಾಸವಾದೀತು. ಭಕ್ತಿಯ ಬೆಳೆ ಬೆಳೆದೀತು, ಘನಪ್ರಸಾದವುದ್ಧರಿಸೀತು. ಕೂಡಲಚೆನ್ನಸಂಗಯ್ಯನ ಶ್ರೀಪಾದವೆ ಸಾಕ್ಷಿಯಾಗಿ ಬಸವಣ್ಣನೊಬ್ಬನೆ ಕರ್ತನಾದನು.