ಆಚಾರವೆಂಬುದು ಕೂರಲಗು,
ತಪ್ಪಿ ಬಂದಡೆ ಪ್ರಾಣವ ತಗಲುವುದು.
ಅದು ಕಾರಣ, ಅರಿದರಿದು ಆಚರಿಸಬೇಕು.
ಆಚಾರವಿಚಾರ ಉಭಯದ ವಿಚಾರವ ನೋಡದೆ,
ಶಿವದೀಕ್ಷೆಯ ಮಾಡಲಾಗದು.
ಅದೆಂತೆಂದಡೆ:
ಪರರ ಹೆಣ್ಣಿಗೆ ಕಣ್ಣಿಡದಿಹುದೆ ಒಂದನೆಯ ಆಚಾರ.
ಪರರ ದ್ರವ್ಯವ ಅಪಹಾರ ಮಾಡದಿಹುದೆ ಎರಡನೆ ಆಚಾರ.
ಸುಳ್ಳಾಡದಿರವುದೆ ಮೂರನೆಯ ಆಚಾರ.
ವಿಶ್ವಾಸಘಾತವ ಮಾಡದಿಹುದೆ ನಾಲ್ಕನೆಯ ಆಚಾರ.
ಪ್ರಾಣಹಿಂಸೆಯ ಮಾಡದಿಹುದೆ ಐದನೆಯ ಆಚಾರ.
ಸಕಲ ಶಿವಶರಣರ್ಗೆ ಸಂತೋಷವಂ
ಪುಟ್ಟಿಸುವುದೆ ಆರನೆಯ ಆಚಾರ.
ಸ್ವೀಕರಿಸಿದ ನೇಮವ ಪ್ರಾಣಾಂತ್ಯವಾಗಿ
ಬಿಡೆನೆಂಬುವ ಏಳನೆಯ ಆಚಾರ.
ಷಟ್ಸ್ಥಲದವರ ಧಿಕ್ಕರಿಸುವ ಜನರ
ಸೀಳುವೆನೆಂಬುವ ವ್ರತವೆ ಎಂಟನೆ ಆಚಾರ.
ಕೆಟ್ಟಜನರ ಸಹವಾಸವ ಮಾಡದಿಹುದೆ
ಒಂಬತ್ತನೆಯ ಆಚಾರ.
ಸಜ್ಜನಸಂಗತಿಯ ಬಿಡದಿಹುದೆ ಹತ್ತನೆಯ ಆಚಾರ.
ಅನ್ಯದೇವತಾಭಜನೆಗೆ ವಿಮುಖನಾಗುವುದೆ
ಹನ್ನೊಂದನೆಯ ಆಚಾರ.
ಶಿವನೇ ಸರ್ವದೇವಶಿಖಾಮಣಿಯೆಂದು ಮನದಲ್ಲಿ
ಅಚ್ಚೊತ್ತಿಪ್ಪುದೆ ಹನ್ನೆರಡನೆಯ ಆಚಾರ.
ಶಿವನಿಗೆ ಶಿವಗಣಂಗಳಿಗೆ ಭೇದವ
ಮಾಡದಿಹುದೆ ಹದಿಮೂರನೆಯ ಆಚಾರ.
ಸಕಲ ಜೀವಿಗಳಿಗೆ ಹಿತವ ಬಯಸುವುದೆ
ಹದಿನಾಲ್ಕನೆಯ ಆಚಾರ.
ಸರ್ವರಿಗೆ ಹಿತವ ಮಾಡುವುದೆ
ಹದಿನೈದನೆಯ ಆಚಾರ.
ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಾಡುವುದೆ
ಹದಿನಾರನೆಯ ಆಚಾರ.
ಸರ್ವಾವಯವವ ಸ್ವಚ್ಛ ಪ್ರಕ್ಷಾಳಿಸುವುದೆ
ಹದಿನೇಳನೆಯ ಆಚಾರ
ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಾಡದಿಹುದೆ
ಹದಿನೆಂಟನೆಯ ಆಚಾರ.
ಪ್ರಣವಮುದ್ರೆ ಇಲ್ಲದ ವಸ್ತ್ರ ಹೊದೆಯದಿಹುದೆ
ಹತ್ತೊಂಬತ್ತನೆಯ ಆಚಾರ.
ಹುಟ್ಟಿದ ಶಿಶುವಿಗೆ ಲಿಂಗಾಧಾರಣ ಮಾಡದೆ,
ತಾಯ ಮೊಲೆಹಾಲು ಜೇನುತುಪ್ಪ ಮುಟ್ಟಿಸದಿಹುದೆ
ಇಪ್ಪತ್ತನೆಯ ಆಚಾರ.
ಆಡಿದ ಭಾಷೆಯ ಕಡೆಪೂರೈಸುವುದೆ
ಇಪ್ಪತ್ತೊಂದನೆಯ ಆಚಾರ.
ಸತ್ಯವ ನುಡಿದು ತಪ್ಪದಿಹುದೆ
ಇಪ್ಪತ್ತೆರಡನೆಯ ಆಚಾರ.
ತುರುಗಳ ಕಟ್ಟಿ ರಕ್ಷಿಸುವುದೆ
ಇಪ್ಪತ್ತುಮೂರನೆಯ ಆಚಾರ.
ತುರುಗಳಿಗೆ ಲಿಂಗಮುದ್ರೆಯಿಕ್ಕಿ ಹಾಲು ಕರೆವುದು
ಇಪ್ಪತ್ತುನಾಲ್ಕನೆಯ ಆಚಾರ.
ಮಂತ್ರಸಹಿತ ಗೋಮಯವ ಹಿಡಿದು,
ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಾಡುವುದೆ
ಇಪ್ಪತ್ತೈದನೆಯ ಆಚಾರ.
ಆ ಭಸ್ಮದ ರಾಶಿಯ ಪಾದೋದಕದೊಡನೆ
ಉಂಡಿಯ ಕಟ್ಟುವುದೆ ಇಪ್ಪತ್ತಾರನೆಯ ಆಚಾರ.
ವಿಧಿಯರಿತು ಸ್ಥಾನವರಿತು ರುದ್ರಾಕ್ಷಿಗಳ ಧರಿಸುವುದೆ
ಇಪ್ಪತ್ತೇಳನೆಯ ಆಚಾರ.
ಶಿವಾನುಭವವ ಶಾಸ್ತ್ರವ ವಿಚಾರಿಸುವುದೆ
ಇಪ್ಪತ್ತೆಂಟನೆಯ ಆಚಾರ.
ಮನವ ನೋಯಿಸಿ ಮಾತನಾಡದಿಹುದೆ
ಇಪ್ಪತ್ತೊಂಬತ್ತನೆಯ ಆಚಾರ.
ಲಿಂಗದ ಕಲೆಯರಿತು ಲಿಂಗವ ಪೂಜಿಸುವುದೆ
ಮೂವತ್ತನೆಯ ಆಚಾರ.
ಗುರುಮುಖದಿಂದ `ತಾನಾರು' ತನ್ನ ನಿಜವೇನೆಂದು
ಬೆಸಗೊಳ್ಳವುದೆ ಮೂವತ್ತೊಂದನೆಯ ಆಚಾರ.
ಷಡ್ವರ್ಗಂಗಳ ಮೆಟ್ಟಿ ಷಟ್ಸ್ಥಲವನಿಂಬುಗೊಂಡುದೆ
ಮೂವತ್ತೆರಡನೆಯ ಆಚಾರ.
ಅವಿಚ್ಛಿನ್ನವಾಗಿ ಅಂಗತ್ರಯದಲ್ಲಿ ಮನ ಓಕರಿಸಿಕೊಂಡುದೆ
ಮೂವತ್ತುಮೂರನೆಯ ಆಚಾರ.
ಲಿಂಗದಲ್ಲಿ ಶಿಲೆಯ ಭಾವವನರಸದಿಹುದೆ
ಮೂವತ್ತುನಾಲ್ಕನೆಯ ಆಚಾರ.
ಜಂಗಮದಲ್ಲಿ ಕುಲವನರಸದಿಹುದೆ
ಮೂವತ್ತೈದನೆಯ ಆಚಾರ.
ವಿಭೂತಿಯ ಮಾಣ್ಬದಿಹುದೆ
ಮೂವತ್ತಾರನೆಯ ಆಚಾರ.
ರುದ್ರಾಕ್ಷಿಯ ಶುದ್ಧವ ಮಾಡಿ ಮಣಿಗಳ ಅರಸುವುದೆ
ಮೂವತ್ತೇಳನೆಯ ಆಚಾರ.
ಪಾದೋದಕದಲ್ಲಿ ಉಚ್ಛಿಷ್ಟವಳಿದುದೆ
ಮೂವತ್ತೆಂಟನೆಯ ಆಚಾರ.
ಪ್ರಸಾದದಲ್ಲಿ ರುಚಿಯ ನೋಡದಿಹುದೆ
ಮೂವತ್ತೊಂಬತ್ತನೆಯ ಆಚಾರ.
ಮಂತ್ರದಲ್ಲಿ ಕುತ್ಸಿತಕಲ್ಪನೆಯ ಮಾಡದಿಹುದೆ
ನಾಲ್ವತ್ತನೆಯ ಆಚಾರ.
ಲಿಂಗಾರ್ಚನವಿರಹಿತ ಭೋಜನ ಮಾಡದಿಹುದೆ
ನಾಲ್ವತ್ತೊಂದನೆಯ ಆಚಾರ.
ಐಕ್ಯರ ಸಮಾಧಿಗೊಳಿಸಿ ತಾನು ಲಿಂಗಪೂಜೆಯ ಮಾಡುವುದೆ
ನಾಲ್ವತ್ತೆರಡನೆಯ ಆಚಾರ.
ಲಿಂಗದ್ರೋಹವ ಕೇಳಿ ತಾನು ಪ್ರಾಣಬಿಡುವುದೆ
ನಾಲ್ವತ್ತುಮೂರನೆಯ ಆಚಾರ.
ಜಂಗಮದ್ರೋಹವ ಕೇಳಿ ತಾನು ಐಕ್ಯನಾಗುವುದೆ
ನಾಲ್ವತ್ತುನಾಲ್ಕನೆಯ ಆಚಾರ.
ಲಿಂಗದ್ರೋಹವ ಮಾಡಿದವನ ಪ್ರಾಣವ ಭೇದಿಸುವುದೆ
ನಾಲ್ವತ್ತೈದನೆಯ ಆಚಾರ.
ಜಂಗಮದ್ರೋಹವ ಮಾಡಿದವನ ಶಿರವನೀಡಾಡುವುದೆ
ನಾಲ್ವತ್ತಾರನೆಯ ಆಚಾರ.
ಅಷ್ಟಾವರಣಸಂಗವ ಮಾಡುವ ಭೇದವ ತಿಳಿವುದೆ
ನಾಲ್ವತ್ತೇಳನೆಯ ಆಚಾರ.
ತಾನಾರು ಲಿಂಗವಾರು ಎಂಬ ಭೇದವು
ತಿಲಮಾತ್ರ ಇಲ್ಲದಿರುವುದೆ ನಾಲ್ವತ್ತೆಂಟನೆಯ ಆಚಾರ.
ತನ್ನ ನಿಜವಿಚಾರವ ತಾ ಮರೆಯದೆ
ಷಟ್ಸ್ಥಲದವರಿಗೆ ಅರುಹಿ
ತನ್ನಂತೆ ಮಾಡುವುದೆ ನಾಲ್ವತ್ತೊಂಬತ್ತನೆಯ ಆಚಾರ.
ಇಂತಿಷ್ಟು ಆಚಾರಂಗಳ ಕಡೆಮುಟ್ಟಿಸುವುದೆ,
ಕೂಡಲಚೆನ್ನಸಂಗಮದೇವರಲ್ಲಿ
ಐವತ್ತನೆಯ ಆಚಾರ ನೋಡಾ ಸಿದ್ದರಾಮಯ್ಯಾ.
Art
Manuscript
Music
Courtesy:
Transliteration
Ācāravembudu kūralagu,
tappi bandaḍe prāṇava tagaluvudu.
Adu kāraṇa, aridaridu ācarisabēku.
Ācāravicāra ubhayada vicārava nōḍade,
śivadīkṣeya māḍalāgadu.
Adentendaḍe:
Parara heṇṇige kaṇṇiḍadihude ondaneya ācāra.
Parara dravyava apahāra māḍadihude eraḍane ācāra.
Suḷḷāḍadiravude mūraneya ācāra.
Viśvāsaghātava māḍadihude nālkaneya ācāra.
Prāṇahinseya māḍadihude aidaneya ācāra.
Sakala śivaśaraṇarge santōṣavaṁ
puṭṭisuvude āraneya ācāra.
Svīkarisida nēmava prāṇāntyavāgi
biḍenembuva ēḷaneya ācāra.
Ṣaṭsthaladavara dhikkarisuva janara
sīḷuvenembuva vratave eṇṭane ācāra.
Keṭṭajanara sahavāsava māḍadihude
ombattaneya ācāra.
Sajjanasaṅgatiya biḍadihude hattaneya ācāra.
An'yadēvatābhajanege vimukhanāguvude
hannondaneya ācāra.
Śivanē sarvadēvaśikhāmaṇiyendu manadalli
accottippude hanneraḍaneya ācāra.
Śivanige śivagaṇaṅgaḷige bhēdava
māḍadihude hadimūraneya ācāra.
Sakala jīvigaḷige hitava bayasuvude
hadinālkaneya ācāra.
Sarvarige hitava māḍuvude
hadinaidaneya ācāra.
Kaḍḍiya liṅgakke tōri dantadhāvaneya māḍuvude
hadināraneya ācāra.
Sarvāvayavava svaccha prakṣāḷisuvude
hadinēḷaneya ācāra
liṅgamudreyillada guḍiyalli pākava māḍadihude
hadineṇṭaneya ācāra.
Praṇavamudre illada vastra hodeyadihude
hattombattaneya ācāra.
Huṭṭida śiśuvige liṅgādhāraṇa māḍade,
tāya molehālu jēnutuppa muṭṭisadihude
ippattaneya ācāra.
Āḍida bhāṣeya kaḍepūraisuvude
ippattondaneya ācāra.
Satyava nuḍidu tappadihude
ippatteraḍaneya ācāra.
Turugaḷa kaṭṭi rakṣisuvude
ippattumūraneya ācāra.
Turugaḷige liṅgamudreyikki hālu karevudu
ippattunālkaneya ācāra.
Mantrasahita gōmayava hiḍidu,
mantrasahita puṭavikki bhasmada rāśiya māḍuvude
ippattaidaneya ācāra.
Ā bhasmada rāśiya pādōdakadoḍane
uṇḍiya kaṭṭuvude ippattāraneya ācāra.
Vidhiyaritu sthānavaritu rudrākṣigaḷa dharisuvude
Ippattēḷaneya ācāra.
Śivānubhavava śāstrava vicārisuvude
ippatteṇṭaneya ācāra.
Manava nōyisi mātanāḍadihude
ippattombattaneya ācāra.
Liṅgada kaleyaritu liṅgava pūjisuvude
mūvattaneya ācāra.
Gurumukhadinda `tānāru' tanna nijavēnendu
besagoḷḷavude mūvattondaneya ācāra.
Ṣaḍvargaṅgaḷa meṭṭi ṣaṭsthalavanimbugoṇḍude
mūvatteraḍaneya ācāra.
Avicchinnavāgi aṅgatrayadalli mana ōkarisikoṇḍude
mūvattumūraneya ācāra.
Liṅgadalli śileya bhāvavanarasadihude
mūvattunālkaneya ācāra.
Jaṅgamadalli kulavanarasadihude
Mūvattaidaneya ācāra.
Vibhūtiya māṇbadihude
mūvattāraneya ācāra.
Rudrākṣiya śud'dhava māḍi maṇigaḷa arasuvude
mūvattēḷaneya ācāra.
Pādōdakadalli ucchiṣṭavaḷidude
mūvatteṇṭaneya ācāra.
Prasādadalli ruciya nōḍadihude
mūvattombattaneya ācāra.
Mantradalli kutsitakalpaneya māḍadihude
nālvattaneya ācāra.
Liṅgārcanavirahita bhōjana māḍadihude
nālvattondaneya ācāra.
Aikyara samādhigoḷisi tānu liṅgapūjeya māḍuvude
nālvatteraḍaneya ācāra.
Liṅgadrōhava kēḷi tānu prāṇabiḍuvude
Nālvattumūraneya ācāra.
Jaṅgamadrōhava kēḷi tānu aikyanāguvude
nālvattunālkaneya ācāra.
Liṅgadrōhava māḍidavana prāṇava bhēdisuvude
nālvattaidaneya ācāra.
Jaṅgamadrōhava māḍidavana śiravanīḍāḍuvude
nālvattāraneya ācāra.
Aṣṭāvaraṇasaṅgava māḍuva bhēdava tiḷivude
nālvattēḷaneya ācāra.
Tānāru liṅgavāru emba bhēdavu
tilamātra illadiruvude nālvatteṇṭaneya ācāra.
Tanna nijavicārava tā mareyade
ṣaṭsthaladavarige aruhi
tannante māḍuvude nālvattombattaneya ācāra.
Intiṣṭu ācāraṅgaḷa kaḍemuṭṭisuvude,
kūḍalacennasaṅgamadēvaralli
aivattaneya ācāra nōḍā siddarāmayyā.