Index   ವಚನ - 996    Search  
 
ಆಚಾರಸಹಿತ ಲಿಂಗಭಕ್ತನಾದರೆ, ದೈವವೆಂಬುದ ತನ್ನಲ್ಲಿಯೆ ಅರಿಯಬೇಕು. ಇದಿರ ಅನ್ಯಭವಿಯ [ದೈವವ], ಕೊಂಡ ಕಾರಣವೇನಯ್ಯಾ? ಲಿಂಗೈಕ್ಯಂಗೆ ಅರಿಷಡ್ವರ್ಗ ಮಲತ್ರಯಂಗಳೆಂಬ ಭವಿಗಳನರಿಯಬೇಕು. ಅರಿದರಿದು ಆನಂದವೆಂಬ ಗುರುವಿನ ಕರದಿಂದ ಇವರ ಭಕ್ತರ ಮಾಡಿ, ದೀಕ್ಷೆ ಶಿಕ್ಷೆ ಸ್ವಾನುಭಾವದಿಂದ ತನ್ನನೇ ಅರಿಯಬೇಕು. ತ್ರಿಕರಣ ಘುಟಿಕೆಯಿಂದ ಜೀವಕಳೆಯನಿಕ್ಕಿ ಇವರ ಭಕ್ತರಂ ಮಾಡಿ ಶಿವಲಿಂಗಾರ್ಚನೆಯ ಮಾಡುವಾತನೀಗ ಶೀಲವಂತ. ಅವರಿಂ ಮತ್ತನಾಗಿ ವಿಸಟಂಬರಿದು, ಅವು ಹೇಂಗೆ ಪ್ರಯೋಗಿಸಿದವು ಹಾಂಗೆ ಅವರಿಚ್ಛೆಗೆ ತಾನು ಪ್ರಯೋಗಿಸದೆ, ಪರಿಣಾಮದಿಂದ ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿಕೊಂಬಾತನೀಗ ಲಿಂಗಸುಯಿಧಾನಿ, ಭವಿಪಾಕವ ಬಿಟ್ಟಾತ. "ಅರ್ಪಯೇದ್ಯಃ ಸ್ವಯಂ ಪಾಕಂ ಪರಪಾಕಂ ವಿವರ್ಜಯೇತ್| ವ್ಯಾಪಾರಂ ಸಕಲಂ ತ್ಯಕ್ತ್ವಾ ಸ ರುದ್ರೋ ನಾತ್ರ ಸಂಶಯಃ”|| ಇಂತಪ್ಪಾತನೀಗ ಲಿಂಗೈಕ್ಯನು. ಇನ್ನು ಅನ್ಯದೈವವೆಂಬವು; ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ, ಕೂರ್ಮ, ಕ್ರಕರ, ದೇವದತ್ತ, ಧನಂಜಯವೆಂಬ ದಶವಾಯುಗಳುಂಟಾಗಿ, ತನ್ನ ತಾನರಿದ ಪುರುಷಂಗೆ ಇವೆ ಅನ್ಯದೈವ ಕಾಣಿಭೋ! “ಭೂತಲಿಂಗಮಿದಂ ಜ್ಞೇಯಂ ಪ್ರೇತಲಿಂಗಂ ಶಿವಾರ್ಚಕಃ| ಭೂತಪ್ರೇತಪಿಶಾಚಾಂಶ್ಚ ದೂರತಃ ಪರಿವರ್ಜಯೇತ್”|| ಇಂತಪ್ಪ ಭವಿ-ಭಕ್ತರೆಂಬ ಭೇದವನರಿಯದೆ ಇದಿರಲ್ಲಿ ಅನ್ಯದೈವವುಂಟೆಂಬ ಶೀಲರೆಲ್ಲ ಶೀಲವಂತರೆ? ಅವರಂತಿರಲಿ. ತನ್ನ ಮನದ ತಮಂಧವ ಕಳೆದು, ತನ್ನೊಳಗಿದ್ದ ಭವಿಗಳ ಭಕ್ತರ ಮಾಡಿ ತನ್ನ ವಾಯುಭೂತಂಗಳ ಅನ್ಯದೈವವೆಂದೆನಿಸದೆ, ಶಿವಸಂಸ್ಕಾರಿಗಳೆಂದೆನಿಸಿ ನಿತ್ಯ ಲಿಂಗಾರ್ಚನೆಯ ಮಾಡಬಲ್ಲ ಮಹಾಪುರುಷನ, ಶ್ರೀಹಸ್ತಂಗಳಲ್ಲಿ ಪೊಗಳುತ್ತಿದ್ದವೈ ವೇದ. "ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ| ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಭಿಮರ್ಶನಃ, ಅಯಂ ಮಾತಾ ಅಯಂ ಪಿತಾ”|| ಇಂತಪ್ಪ ಲಿಂಗಾರ್ಚನೆಯ ಮಾಡಬಲ್ಲಾತ ಸಂಬಂಧಿಯೆನಿಸಿಕೊಳ್ಳಬಲ್ಲಾತ. ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣ, ಬಸವಣ್ಣಂಗೆ ಸುಲಭವಾಯಿತ್ತು ಮಿಕ್ಕಿನವರಿಗೆಲ್ಲ ಅಸುಲಭ.