Index   ವಚನ - 1000    Search  
 
ಆತ್ಮನು ಅಷ್ಟದಳ ಕಮಲದಳಂಗಳ ಮೆಟ್ಟಿ ಚರಿಸಿ ಆಡುವ ವಿಧವೆಂತೆಂದಡೆ; ಇಂದ್ರದಳವೇರಿದಲ್ಲಿ ಗುಣಿಯಾಗಿಹನು. ಅಗ್ನಿದಳವೇರಿದಲ್ಲಿ ಕ್ಷುಧಾತುರದಿಂ ಹಸಿದಿರುತ್ತಿಹನು. ಯಮದಳವೇರಿದಲ್ಲಿ ಕ್ರೋಧದಿಂ ದುರಿತ ಚೇಷ್ಟಿತನಾಗಿಹನು. ನೈಋತ್ಯದಳವೇರಿದಲ್ಲಿ ದ್ವೇಷಿಸುತ್ತಲಿಹನು. ವರುಣದಳವೇರಿದಲ್ಲಿ ನಿದ್ರೆಗೈವುತ್ತಿಹನು. ವಾಯುವ್ಯದಳವೇರಿದಲ್ಲಿ ಸಂಚಲಚಿತ್ತದಿಂ ಗಮನಿಯಾಗಿಹನು. ಕುಬೇರದಳವೇರಿದಲ್ಲಿ ಧರ್ಮಬುದ್ಧಿಯಿಂ ಪರಹಿತಾರ್ಥಿಯಾಗಿಹನು. ಈಶಾನ್ಯದಳವೇರಿದಲ್ಲಿ ಸ್ತ್ರೀಗೋಷ್ಠಿ ವಿಷಯಾತುರನಾಗಿಹನು. ಮಧ್ಯಸ್ಥಾನಕ್ಕೆ ಬಂದು ನಿಂದಲ್ಲಿ ಸದ್ಭಾವಿಯಾಗಿ ಉತ್ತರಪಥ ಪರಮಾರ್ಥ ಮೋಕ್ಷಗಾಮಿಯಾಗಿಹನು. ಇಂತೀ ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನ ನೆಲೆಗೆಡಿಸಿ ಸದ್ಭಾವಿಯಾಗಿರಬಲ್ಲ ಕೂಡಲಚೆನ್ನಸಂಗಾ ನಿಮ್ಮ ಶರಣನು