ಆದಿಲಿಂಗ, ಅನಾದಿ ಶರಣನೆಂಬುದು ತಪ್ಪದು;
ಆದಿ ಗುರು, ಅನಾದಿ ಶಿಷ್ಯನೆಂಬುದು ತಪ್ಪದು.
ಗುರುವಿಂಗೆ ಶಿಷ್ಯಂಗೆ ಏನು ದೂರ ದೇವಾ?
ಮುಳ್ಳುಗುತ್ತುವಡೆ ತೆರಹಿಲ್ಲದ ಪರಿಪೂರ್ಣ ಘನವು.
ಒಬ್ಬರಲ್ಲಿ ಒಂದು ಭಾವವುಂಟೆ?
ಎನ್ನೊಳಗೆ ಬೆಳಗುವ ಜ್ಞಾನ,
ನಿನ್ನ ಹೃದಯಕಮಲದೊಳಗಣ ಆವ್ಯಕ್ತಲಿಂಗ.
ನಿನ್ನೊಳು ತೊಳಗಿ ಬೆಳಗುವ ಜ್ಯೋತಿರ್ಲಿಂಗ
ಎನ್ನಂತರಂಗದ ಸುಜ್ಞಾನಲಿಂಗ.
ಒಂದರಲ್ಲಿ ಒಂದು ಬಿಚ್ಚಿ ಬೇರೆ ಮಾಡಬಾರದಾಗಿ,
ಪ್ರಾಣಲಿಂಗ ಒಂದೆ, ಉಪದೇಶ ಒಂದೆ,
ಕ್ರಿಯಾಕರ್ಮ ಒಂದೆ.
ನೀವಿನ್ನಾವುದ ಬೇರೆಮಾಡಿ ನುಡಿವಿರಯ್ಯಾ?
ಕಾರ್ಯದಲ್ಲಿ ಗುರುವಾಗಿ,
ಅಂತರಂಗಕ್ಕೆ ಸುಜ್ಞಾನೋಪದೇಶವ
ಮುನ್ನವೆ ಮಾಡಿದ ಬಳಿಕ
ಕ್ರೀಯಿಂದ ಮಾಡಲಮ್ಮೆನೆಂದಡೆ ಹೋಹುದೆ?
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ
ಎನಗೆ ನೀವು ಉಪದೇಶವ ಮಾಡಿದಡೆ
ಮರ್ತಲೋಕದ ಮಹಾಗಣಂಗಳ ಕೈಯಲ್ಲಿ
ಅಹುದಹುದೆನಿಸುವೆ
ಕಾಣಾ ಸಂಗನಬಸವಣ್ಣ.