Index   ವಚನ - 1026    Search  
 
ಆರಿಗೆ ಮಾಡಬಹುದಯ್ಯಾ ಸದ್ಭಕ್ತಿಯೆಂಬುದನು ಬಸವಣ್ಣಂಗಲ್ಲದೆ? ಆರಿಗೆ ತಿಳಿವುದಯ್ಯಾ ಶಿವಜ್ಞಾನದ ಸೆರಗು ಬಸವಣ್ಣಂಗಲ್ಲದೆ? ನಿರಾಳದ ಸಿಂಹಾಸನದ ಮೇಲೆ ನಿರವಯ ಬಂದೆರಗಿದಡೆ ಆ ನಿರಾಕಾರ ಪದಾರ್ಥವನರ್ಪಿಸಿ, ಪ್ರಸನ್ನತೆಯ ಪಡೆದ ಬಸವಣ್ಣನು! ಸಾಕಾರಸಿಂಹಾಸನದ ಮೇಲೆ ಮೂರ್ತಿಗೊಂಡ ಸಂಗಮನಾಥ ಮುನಿದೆದ್ದು ಹೋದಡೆ, ತನುವಿನೊಳಗೆ ತನುವಾಗಿ ಹೊಕ್ಕು ಮನದೊಳಗೆ ಮನವಾಗಿ, ಭಾವದೊಳಗೆ ಭಾವವಾಗಿ ವೇದಿಸಿ ಶಿವಶರಣರ ಮನದ ಕಂದುಕತ್ತಲೆಯ ಕಳೆದು, ತನ್ನತ್ತ ತಿರುಗಿ ಪ್ರಸನ್ನತೆವಡೆದ. ಇಂತೀ ಉಭಯ ನಿರ್ಣಯದಲ್ಲಿ ನಿಸ್ಸೀಮನಾದ ಬಸವಣ್ಣ. ಕೂಡಲಚೆನ್ನಸಂಗಮದೇವರ ಶರಣ ಬಸವಣ್ಣಂಗೆ ತ್ರಿಜಗದೊಳಗೆ ಆರನೂ ಸರಿ ಕಾಣೆನು.