Index   ವಚನ - 1043    Search  
 
ಉಂಬುವುದು ಉಡುವುದು ಶಿವಾಚಾರ, ಕೊಂಬುದು ಕೊಡುವುದು ಕುಲಾಚಾರ ಎಂಬ ಅನಾಚಾರಿಯ ಮಾತ ಕೇಳಲಾಗದು. ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರ ಒಂದೆ ಎಂದು ಕೊಟ್ಟು ಕೊಂಬುದು ಸದಾಚಾರ, ಉಳಿದುದೆಲ್ಲ ಅನಾಚಾರ. ಅದೆಂತೆಂದಡೆ; ಸ್ಫಟಿಕದ ಕೊಡದಲ್ಲಿ ಕಾಳಿಕೆಯನರಸುವ ಹಾಗೆ, ಸಿಹಿಯೊಳಗೆ ಕಹಿಯನರಸುವ ಹಾಗೆ, ರಜಸ್ಸೂತಕ ಕುಲಸೂತಕ ಜನನಸೂತಕ ಪ್ರೇತಸೂತಕ ಉಚ್ಛಿಷ್ಟಸೂತಕ ಎಂದಡೆ, ಆತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ತೀರ್ಥಪ್ರಸಾದವಿಲ್ಲ. ಇಂತೀ ಪಂಚಸೂತಕವ ಕಳೆದಲ್ಲದೆ ಭಕ್ತನಾಗ. ಇಂತಹ ಭಕ್ತರಲ್ಲಿ ಕೊಟ್ಟು ಕೊಂಬುದು ಸದಾಚಾರ ಕೂಡಲಚೆನ್ನಸಂಗಮದೇವಾ.

C-397 

  Tue 21 Nov 2023  

 Very much for your songs
  Manju clj