Index   ವಚನ - 1048    Search  
 
ಉದಕದೊಳಗಣ ವಿಕಾರ ಪವನನಿಂದಲ್ಲದೆ, ಉದಕ ಸಹಜಬೀಜವೆಂದರಿಯಬಹುದೆ? ದೇಹ ಪ್ರಪಂಚಂಗಳು ವಾಯುವಿಂದಲ್ಲದೆ, ದೇಹದಲ್ಲಿ ಬೇರೊಂದು ಗುಣವನರಸುವರೆ? ಮಂಜಿನ ಗುರಿಯ ಬಿಸಿಲ ಅಂಬಿನಲ್ಲಿ ಎಚ್ಚಡೆ, ಕರ ಹೊಸತಾಯಿತ್ತಲ್ಲಾ! ಸಹಜದ ನಿಲವು ಜೀವ ಪರಮಾತ್ಮನೆಂದು ಎರಡನು ನುಡಿಯಲಿಲ್ಲ. ಬೇರೆ ನೆನೆವ ಮನ ತಾನೆಯಾಗಿ ತೆರಹಿಲ್ಲದ ಘನ. ಗಗನದ ಸೂರ್ಯ ಜಲದಲ್ಲಿ ತೋರುವಂತೆ, ಹಲವು ರವಿಯೆಂದು ಮತ್ತೆಣಿಸಲುಂಟೆ? ಒಳಹೊರಗು ಎಂದೆನ್ನದೆ ಮುಟ್ಟಿಯೂ ಮುಟ್ಟದಿಪ್ಪ, ಬಯಲೊಳಡಗಿದ ನಿರಾಳವನು ಕೇಳುವ ಕೀರುತಿಯಲ್ಲ ನೋಡುವ ಮೂರುತಿಯಲ್ಲ ಪರಿಪೂರ್ಣ ಪರಂಜ್ಯೋತಿ ನಿರ್ಗುಣ ಮಹಿಮ. ಭಾವವಿಲ್ಲದ ಶಬ್ದವನು ಕೇಳಬಲ್ಲವನೊಬ್ಬನೆ, ಕೂಡಲಚೆನ್ನಸಂಗಮದೇವರಲ್ಲಿ ಪ್ರಭುವೆ ನೀನೆ ಬಲ್ಲೆ.