Index   ವಚನ - 1054    Search  
 
ಉಪದೇಶವ ಮಾಡುವ ಗುರು ಒಬ್ಬನಲ್ಲದೆ ಇಬ್ಬರು ಸಾಲದು ನೋಡಾ. ಉಪದೇಶವ ಮಾಡುವ ಗುರು ಒಂದಾದಲ್ಲಿ ಲಿಂಗ ಒಂದು, ಲಿಂಗ ಒಂದಾದಲ್ಲಿ ದೀಕ್ಷೆ ಒಂದು, ದೀಕ್ಷೆ ಒಂದಾದಲ್ಲಿ ಪ್ರಸಾದ ಒಂದು, ಪ್ರಸಾದ ಒಂದಾದಲ್ಲಿ ಭಕ್ತಿ ಒಂದು, ಭಕ್ತಿ ಒಂದಾದಲ್ಲಿ ಮುಕ್ತಿ ಒಂದು, ಅದೆಂತೆಂದಡೆ: "ಗುರುಮೇಕಂ ಲಿಂಗಮೇಕಂ ದೀಕ್ಷಾಮೇಕಾಂ ಪ್ರಸಾದಕಮ್| ಏಕಮುಕ್ತಿಮಿದಂ ದೇವಿ ವಿಶೇಷಂ ಶುದ್ಧಭಕ್ತಿಮಾನ್|| ದ್ವಯೋರ್ಗುರು ದ್ವಯೋರ್ಲಿಂಗ ದ್ವಯೋದೀಕ್ಷಾ ಪ್ರಸಾದಯೋಃ| ಯಥಾದ್ವಯಮಿದಂ ದೇವಿ ವಿಶೇಷಂ ಪಾತಕಂ ಭವೇತ್"|| ಎಂದುದಾಗಿ, ಗುರುವೆರಡಾದಲ್ಲಿ ಲಿಂಗವೆರಡು, ಲಿಂಗವೆರಡಾದಲ್ಲಿ ದೀಕ್ಷೆ ಎರಡು, ದೀಕ್ಷೆ ಎರಡಾದಲ್ಲಿ ಭಕ್ತಿ ಎರಡು, ಭಕ್ತಿ ಎರಡಾದಲ್ಲಿ ಮುಕ್ತಿದೂರ ನೋಡಾ. ಇಂತೀ ಮುಕ್ತಿದೂರರಿಗೆ ಮುಂದೆ ನರಕ ತಪ್ಪದು ನೋಡಾ. ಇದು ಕಾರಣ, ತನ್ನ ಸತಿ-ಸುತ ಪಿತ ಮಾತೆ ಸಹೋದರ ಭೃತ್ಯ ದಾಸಿಯರಿಗುಪದೇಶವ ಮಾಡುವ ಗುರು ಒಬ್ಬನಲ್ಲದೆ ಇಬ್ಬರು ಸಲ್ಲದು ನೋಡಾ. ಅದೆಂತೆಂದಡೆ: "ಪತೀ ಪತ್ನಿ ಭ್ರಾತೃ ಪುತ್ರ ದಾಸಿ ಗೃಹಚರಾದಿನಾಂ| ಏಕದೀಕ್ಷಾ ಭವೇಸಿದ್ದೇವಿ ವಿಶೇಷಂತು ಶುದ್ಧಭಕ್ತಿಮಾನ್"|| ಎಂದುದಾಗಿ, ಒಂದು ಮನೆಗೆ ಗುರುಲಿಂಗವ ಎರಡು ಮಾಡಿಕೊಂಡು ನಡೆದಡೆ ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವನು.