Index   ವಚನ - 1066    Search  
 
ಎನಗೆನ್ನ ಗುರುಬಸವಣ್ಣ ತೋರಿದ ಘನವ, ನಿಮಗೆ ಬಿನ್ನೈಸುವೆನು ಕೇಳಾ ಪ್ರಭುವೆ. ಪ್ರಸಾದದಿಂದ ಹುಟ್ಟಿದ ಕಾಯಕ್ಕೆ ಪ್ರಸಾದದಿಂದೊಗೆದ ಲಿಂಗವ ಕೊಟ್ಟು ಪ್ರಸಾದಲಿಂಗಮುಖದಲ್ಲಿ ಪ್ರಸಾದಮಯವಾದ. ಪ್ರಣವಪಂಚಾಕ್ಷರಿಯ ಪ್ರಸಾದಿಸಿ ತನ್ನಾದಿರೂಪಿನಲ್ಲಿ ಅನಾದಿಲಿಂಗಪ್ರಸಾದವ ಭೋಗವ ಮಾಡಿ ಆ ಪ್ರಸಾದದಿಂದೊಗೆದ ಪ್ರಸಾದವ ತನ್ನ ಪ್ರಸಾದಜ್ಞಾನವೆಂಬ ಪರಮಶಿಖಿಯಿಂದ ದಹನ ಮಾಡಿ, ಎನಗೆ, ಸಮಸ್ತ ಶಿವಭಕ್ತರ್ಗೆ ಇದು ಭಕ್ತಿ ನೀತಿಯೆಂದು ವಿಭೂತಿಯನಿಟ್ಟು ತ್ರಿಪುರದ ಸಂಚವನಳಿದು ತ್ರಿಜಗವ ರಕ್ಷಿಸಲೆಂದು ತ್ರಿಲೋಚನದಲ್ಲಿ ಉಗ್ರಶಾಂತಿ ಗಾಂಭೀರ್ಯವೆಂಬ ಜಲಬಿಂದುವೆ ಬೀಜವಾಗಿ ಬೆಳೆದ ರುದ್ರಾಕ್ಷಿಯ ಧರಿಸಿ, ಶಾಂಭವೀಮುದ್ರೆಯನೊತ್ತಿ, ನಾದ ಬಿಂದು ಕಳೆಯೊಂದಾದಂದಿನ ಅನಾದಿ ಬೋಧಚೈತನ್ಯಜ್ಞಾನಲಿಂಗ ತಾನೆ ಜಂಗಮವೆಂದು ತಿಳುಹಿ, ಆ ಜಂಗಮದ ಪಾದೋದಕ ಪ್ರಸಾದವೆ ಇಷ್ಟವಾದ ಷಡ್ವಿಧಲಿಂಗದ ಮೂಲಾಂಗವೆನಿಸುವ ಇಷ್ಟಲಿಂಗಕ್ಕೆ ಮಜ್ಜನ ನೈವೇದ್ಯವ ಸಜ್ಜನಶುದ್ಧ ಶಿವಭಕ್ತಿಯಿಂದ ಮಾಡೆಂದ ಬಸವಣ್ಣ. ಅದೆಂತೆಂದಡೆ; ಹಂಸೆಗೆ ಹಾಲನೆರೆವರಲ್ಲದೆ ಹುಳಿಯನೆರೆವರೆ? ಇಷ್ಟಲಿಂಗಕ್ಕೆ ಪ್ರಸಾದವೆ ಭೋಜನವೆಂದು ಬಸವಣ್ಣ ನಿರೂಪಿಸಲು, ನಿರಂತರವೆ? ಎಂದು ಬಿನ್ನೈಸೆ, ಬೋಧಿಸಿದ ಬಸವಣ್ಣನು. ಅದೆಂತೆಂದಡೆ; ಪದಾರ್ಥವ ಕೊಟ್ಟಡೆ ಫಲಪದ ತಪ್ಪದು, ಪ್ರಸಾದವ ಕೊಟ್ಟಡೆ ಫಲಂ ನಾಸ್ತಿ ಪದಂ ನಾಸ್ತಿ ಭವಂ ನಾಸ್ತಿ ಎಂದನಯ್ಯಾ ಎನ್ನ ಗುರು ಬಸವಣ್ಣನು. ಅದೆಂತೆಂದಡೆ; ಪದಾರ್ಥವೆ ಕರ್ಮರೂಪ, ಪ್ರಸಾದವೆ ನಿಃಕರ್ಮರೂಪ. “ದ್ರವ್ಯಂ ಕ್ರಿಯಾಸ್ವರೂಪಂ ಚ ಪ್ರಸಾದೋ ಕರ್ಮಬಾಹ್ಯಕಃ| ಪದಾರ್ಥೋ ಜನ್ಮಹೇತುಃ ಸಾತ್ ಪ್ರಸಾದೋ ಭವನಾಶಕಃ”|| ಇಂತೆಂದು ನುಡಿದು, ನಡೆದು ತೋರಿ ಹೊರೆದನಲಾ ಬಸವಣ್ಣ, ಸಕಲ ಮಾಹೇಶ್ವರರ. ಇದನರಿದು ಕೊಡುವದು, ಇದನರಿದು ಕೊಂಬುದು. ಇದೇ ಭಕ್ತಿಗೆ ಬೇಹ ಬುದ್ಧಿ, ಇದೇ ಪ್ರಸಾದಕ್ಕೆ ಪರಮಕಾರಣ. ಇಂತಲ್ಲದವಂಗೆ ಲಿಂಗವಿಲ್ಲ; ಲಿಂಗವಿಲ್ಲಾಗಿ ಪ್ರಸಾದವಿಲ್ಲ. ಇದನರಿದು, ಗುರುವಿಡಿದು ಲಿಂಗದಿಚ್ಛೆಯನರಿದು ಸುಖಿಸಿದೆನಯ್ಯಾ, ಕೂಡಲಚೆನ್ನಸಂಗಮದೇವಾ.