Index   ವಚನ - 1076    Search  
 
ʼಎನ್ನ ಮನೆ' ಎಂಬವಂಗೆ ಬ್ರಹ್ಮನಿಕ್ಕಿದ ಕೋಳವಾಯಿತ್ತು, `ಎನ್ನ ಸ್ತ್ರೀ' ಎಂಬವಂಗೆ ವಿಷ್ಣುವಿಕ್ಕಿದ ಸಂಕಲೆ ಹೂಡಿತ್ತು, `ಎನ್ನ ಧನ' ಎಂಬವಂಗೆ ರುದ್ರನಿಕ್ಕಿದ ಆಸೆ ರೋಷದ ಜಿಂಜಿರಿ ಹೂಡಿತ್ತು, `ಎನ್ನ ಕುಲ' ಎಂಬವಂಗೆ ಈಶ್ವರನಿಕ್ಕಿದ ಸೆರೆಸಾಲೆಯ, ಬಂದೀಕಾನದೊಳಗೆ ಬಿದ್ದ ನೋಡಾ. ಇಂತು ಕೊರಳುದ್ದಕೆ ಹೂಳಿಸಿಕೊಂಡು ಮುಗಿಲುದ್ದಕೆ ಹಾರಿ `ನಾನು ಭಕ್ತ' `ನಾನು ಮಾಹೇಶ್ವರ' ಎಂಬ ನುಡಿಗೆ ನಾಚರು ನೋಡಾ. ಆ ಭಕ್ತನ ವಠಕ್ಕೆ ಜಂಗಮ ನಿರಂತರ ಬರುತ್ತಿರಲು ಬ್ರಹ್ಮನಿಕ್ಕಿದ ಕೋಳ ಕಡಿಯಿತ್ತು. ಆ ಭಕ್ತನ ಸ್ತ್ರೀ ಜಂಗಮದಾಸೋಹವ ನಿರಂತರ ಮಾಡುತ್ತಿರಲು, ವಿಷ್ಣುವಿಕ್ಕಿದ ಸಂಕಲೆ ಕಡಿಯಿತ್ತು. ಆ ಭಕ್ತನ ಧನ ಜಂಗಮಕ್ಕೆ ನಿರಂತರ ನಿರುಪಾಧಿಯಲ್ಲಿ ಸಲ್ಲುತ್ತಿರಲು ಆ ರುದ್ರನಿಕ್ಕಿದ ಆಸೆರೋಷದ ಜಿಂಜಿರಿ ಕಡಿಯಿತ್ತು. ಆ ಭಕ್ತನು ಜಾತಿಸೂತಕವಳಿದು ಶಿವಭಕ್ತರ ಕುಲವ ವಿಚಾರಿಸದೆ ಶಿವಕುಲವೆಂದರಿದು ನಿರಂತರ ಬೆರಸಿಕೊಂಡಿರುತ್ತಿರಲು ಈಶ್ವರನಿಕ್ಕಿದ ಕುಲದ ಸೆರಸಾಲೆಯ ಬಂದೀಕಾನದಿಂದ ಹೊರಹೊಂಟ ನೋಡಾ- ಇಂತು ಇದ್ದೂ ಇಲ್ಲದ ಸಹಜರ ತೋರಿ ಬದುಕಿಸಯ್ಯಾ ಕೂಡಲಚೆನ್ನಸಂಗಮದೇವಾ.