Index   ವಚನ - 1083    Search  
 
ಏಕಭಾಜನ ಏಕಭಾಜನವೆಂದೆಂಬರು; ನಾವಿದನರಿಯೆವಯ್ಯಾ. ಅಂಗದ ಮೇಲೆ ಪ್ರಾಣಲಿಂಗಪ್ರತಿಷ್ಠೆಯಾದ ಬಳಿಕ, ಲಿಂಗಕ್ಕೆಯೂ ತನಗೆಯೂ ಏಕಭಾಜನವಲ್ಲದೆ ಭಿನ್ನಭಾಜನವುಂಟೆ? ಲಿಂಗಕ್ಕೆಯೂ ತನಗೆಯೂ ಏಕಭಾಜನವಾಗದನ್ನಕ್ಕರ ಅಂಗದ ಕಳೆಯಲ್ಲಿ ಲಿಂಗವ ಧರಿಸಿಕೊಳಬಹುದೆ? ಇದನರಿದು ಏಕಭಾಜನವಾಗದಿರ್ದಡೆ ಅಂತು ದೋಷ. ಅರಿಯದೆ ಏಕಭಾಜನವಾದಡೆ ಇಂತು ದೋಷ. ಈ ಕುಳಸ್ಥಳದ ಭೇದವ ಭೇದಿಸಬಲ್ಲ ಕೂಡಲಚೆನ್ನಸಂಗಾ, ನಿಮ್ಮ ಶರಣ.