Index   ವಚನ - 1084    Search  
 
ಏಕಮೂರ್ತಿಸ್ತ್ರಯೋ ಭಾಗಾ ಗುರುರ್ಲಿಂಗಂತು ಜಂಗಮಃ' ಎಂದುದಾಗಿ, ಪರತರಪರಂಜ್ಯೋತಿಯಪ್ಪ ಮಹಾಲಿಂಗವೆ ಲೋಕಾನುಗ್ರಹಕ್ಕಾಗಿ- ಅಗ್ಗಣಿಯೆ ಅಣಿಕಲ್ಲಾದಂತೆ, ಕರಗಿದ ತುಪ್ಪವೆ ಹೆತ್ತುಪ್ಪವಾದಂತೆ. ಗುರು ಲಿಂಗ ಜಂಗಮವಾಗಿ ಪರಿಣಮಿಸಿರ್ಪುದು ಕಾಣಾ! ಆ ಗುರುತತ್ವದಿರವನರಿದು ಗುರುವಾಗಿ ಗುರುಲಿಂಗವ ಪೂಜಿಸಬೇಕು. ಲಿಂಗತತ್ವದಿಂಗಿತವನರಿದು ಲಿಂಗವಾಗಿ ಶಿವಲಿಂಗವ ಪೂಜಿಸಬೇಕು. ಜಂಗಮತತ್ವದಿಂಗಿತವನರಿದು ಜಂಗಮವಾಗಿ ಜಂಗಮವ ಪೂಜಿಸಬೇಕು. ಇಂತೀ ತ್ರಿವಿಧಲಿಂಗವ ಪೂಜಿಸಿ ತ್ರಿವಿಧ ಪಾದೋದಕವ ಪಡೆಯಬೇಕು. ಇದೇ ಅಂತರಂಗದ ಆತ್ಮತೀರ್ಥ, ಕಾಣಾ! "ಅಂತಸ್ಥಂ ಮಾಂ ಪರಿತ್ಯಜ್ಯ ಬಹಿಸ್ಥಂ ಯಸ್ತು ಸೇವತೇ| ಹಸ್ತಸ್ಥಪಿಂಡಮುತ್ಸ್ರುಜ್ಯ ಲಿಹೇತ್ಕೂರ್ಪರಮಾತ್ಮನಃ"|| ಎಂದುದಾಗಿ, ಪರಿಶುದ್ಧವಾದ ಅಂತರಂಗದ ಆತ್ಮತೀರ್ಥವನುಳಿದು, ಬಹಿರಂಗದ ಜಡತೀರ್ಥವ ಸೇವಿಸಿದಡೆ ಷಡ್ರಸದಿಂದೊಡಗೂಡಿದ ಪರಮಾನ್ನದ ಪಿಂಡವನುಳಿದು ಮೋಳಕೈಯ ನೆಕ್ಕಿದಂತಕ್ಕು ಕಾಣಾ, ಕೂಡಲಚೆನ್ನಸಂಗಮದೇವಾ.