Index   ವಚನ - 1085    Search  
 
ಏಕೋ ದೇವೋ ನ ದ್ವಿತೀಯಃ' ಎಂದೆನಿಸುವ ಶಿವನೊಬ್ಬನೆ, ಜಗಕ್ಕೆ ಗುರುವೆಂಬುದನರಿಯದೆ, ವಿಶ್ವಕರ್ಮ ಜಗದ ಗುರುವೆಂದು ನುಡಿವ ದುರಾಚಾರಿಯ ಮುಖವ ನೋಡಲಾಗದು. ಪ್ರಥಮದಲ್ಲಿ ಹುಟ್ಟಿದಾಗ ವಿಶ್ವಕರ್ಮಂಗೆ ತಾಯಿತಂದೆಗಳಾರು? ಅವನು ಹುಟ್ಟಿದಾಗ ಹೊಕ್ಕಳನಾಳವ ಕೊಯ್ವ ಕತ್ತಿಯ ಮಾಡಿದರಾರು? ಅವಂಗೆ ತೊಟ್ಟಿಲವ ಕಟ್ಟಿದರಾರು? ಅವಂಗೆ ಹಾಲು ಬೆಣ್ಣೆ ಬಿಸಿನೀರು ಇಡುವುದಕೆ ಮಡಕೆಯ ಮಾಡಿದರಾರು? ಅವಂಗೆ ವಿದ್ಯಾಬುದ್ಧಿಯ ಕಲಿಸಿದರಾರು? ಅವಂಗೆ ಅರುಹು ಮರಹು ಹುಟ್ಟಿಸಿದರಾರು? ಅವಂಗೆ ಇಕ್ಕುಳ, ಅಡಿಗಲ್ಲು, ಚಿಮ್ಮಟಿಗೆ, ಮೊದಲಾದ ಸಂಪಾದನೆಗಳ ಕೊಟ್ಟವರಾರು? ಇನಿತನು ವಿಚಾರಿಸದೆ ತಾನು ವೆಗ್ಗಳವೆಂದು ಗಳಹುವನ ದುರಾಚಾರಿಯೆಂದು ಭಾವಿಸುವುದು. ಸರ್ವಜಗದ ಜೀವದ ಪ್ರವರ್ತನೆಯ ಚಾರಿತ್ರಂಗಳ ನೆನಹು ಮಾತ್ರದಿಂದ ಶಿವನು ಒಂದೇ ವೇಳೆಯಲ್ಲಿ ನಿರ್ಮಿಸಿದನು. ಅದೆಂತೆಂದಡೆ: ಅರಣ್ಯಗಿರಿಯ ಕನ್ನಡಿಯೊಳು ನೋಡಿದಂತೆ, ಗಿಡವೃಕ್ಷಂಗಳು ಎಳೆಯದು ಹಳೆಯದು ಒಂದೆ ವೇಳೆ ಕಾಣಿಸಿದಂತೆ, ಒಂದೆ ವೇಳೆಯಲಿ ಬೀಜವೃಕ್ಷನ್ಯಾಯದಲ್ಲಿ, ದಿವಾರಾತ್ರಿನ್ಯಾಯದಲ್ಲಿ ಹಿಂಚು ಮುಂಚು ಕಾಣಲೀಯದೆ, ಸರ್ವಜೀವವ ಹುಟ್ಟಿಸಿ, ರಕ್ಷಿಸಿ, ಸಂಹರಿಸಿ, ಲೀಲಾವಿನೋದದಿಂದಿಪ್ಪ ಶಿವನೊಬ್ಬನೆ ಸಕಲ ಜಗಕ್ಕೆ ಗುರುಸ್ವಾಮಿ. "ಮನ್ನಾಥಸ್ತ್ರಿಜಗನ್ನಾಥೋ ಮದ್ಗುರುಸ್ತ್ರಿಜಗದ್ಗುರುಃ| ಸರ್ವಮಮಾತ್ಮಾ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ"|| ಎಂದುದಾಗಿ ಅರಿತರಿತು ಅನಾಚಾರವ ಗಳಹಿ, ಗುರುಲಿಂಗಜಂಗಮವೆ ಘನವೆಂದು ಅರಿಯದ ಶಿವಭಕ್ತಿಶೂನ್ಯ ಪಾತಕನ ಹಿರಿಯನೆಂದು ಸಂಭಾಷಣೆಯ ಮಾಡಿ ಅವನ ಚಾಂಡಾಲ ಬೋಧೆಯ ಕೇಳ್ವ ಪಂಚಮಹಾಪಾತಕನ ರೌರವನರಕದಲ್ಲಿ ಹಾಕಿ ಮೆಟ್ಟಿಸುತಿಪ್ಪ, ಕೂಡಲಚೆನ್ನಸಂಗಮದೇವ.