Index   ವಚನ - 1120    Search  
 
ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡು, ಶಿವನೆ ಆರೋಗಣೆಯ ಮಾಡಿಹನೆಂದು ಮಾಡಲಾಗದು. ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಉದ್ದೇಶಿಗಳನೇನೆಂಬೆಯ್ಯಾ? ಮಾಡಲಾಗದು, ಮಾಡಲಾಗದು! ಏನು ಕಾರಣ? -ಇಂದ್ರಿಯವಿಕಾರ ಬಿಡದನ್ನಕ್ಕ, ತನುವಿಕಾರ ಬಿಡದನ್ನಕ್ಕ, "ಸಂಕಲ್ಪಂ ಚ ವಿಕಲ್ಪಂ ಚ ಭಾವಾಭಾವವಿವರ್ಜಿತಃ| ಯಸ್ಯ ಅಂತಃಕರೇ ಲಿಂಗಂ ನೈವೇದ್ಯಂ ಸಹ ಭೋಜನಂ"|| ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ಸಹಭೋಜನ ನಾಯಕನರಕ.