ಕಾಯಕ್ಲೇಶದಿಂದ ತನುಮನ ಬಳಲಿ, ಧನವ ಗಳಿಸಿ,
ಗುರುಲಿಂಗಜಂಗಮಕ್ಕೆ ವೆಚ್ಚಿಸಿ
ದಾಸೋಹವ ಮಾಡುವ ಭಕ್ತನ
ಪಾದವ ತೋರಯ್ಯಾ, ನಿಮ್ಮ ಧರ್ಮ.
ಅದೇಕೆಂದಡೆ:
ಆತನ ತನು ಶುದ್ಧ,
ಆತನ ಮನ ಶುದ್ಧ,
ಆತನ ನಡೆ ನುಡಿ ಪಾವನ.
ಆತಂಗೆ ಉಪದೇಶವ ಮಾಡಿದ
ಗುರು ನಿರಂಜನ ನಿರಾಮಯ.
ಅಂತಹ ಭಕ್ತನ ಕಾಯವೆ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಕಾಡುವ ಜಂಗಮ ಜಗತ್ಪಾವನ.
ಇಂತಿವರಿಗೆ ನಮೋ ನಮೋ ಎಂಬೆ,
ಕೂಡಲಚೆನ್ನಸಂಗಯ್ಯ