ಗುರುಕಾರುಣ್ಯವಂ ಪಡೆದು
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಕುಲದೈವ, ತನ್ನಂಗದ ಮೇಲಿಪ್ಪ ಲಿಂಗವೆಂದರಿಯದೆ,
ಮನೆ ದೈವ, ತನ್ನ ಮನೆಗೆ ಬಂದ ಜಂಗಮವೆಂದರಿಯದೆ,
ಮತ್ತೆ ಬೇರೆ ಕುಲದೈವ ಮನೆದೈವವೆಂದು
ಧರೆಯ ಮೇಲಣ ಸುರೆಗುಡಿ ಹೊಲೆದೈವ
ಭವಿಶೈವದೈವಂಗಳ ಹೆಸರಿನಲ್ಲಿ
ಕಂಗಳ ಪಟ್ಟ, ಕಾಲ ಪೆಂಡೆಯ, ಕಡೆಯ, ತಾಳಿ,
ಬಂಗಾರಂಗಳ ಮೇಲೆ ಆ ಪರದೈವಂಗಳ
ಪಾದ ಮುದ್ರೆಗಳನೊತ್ತಿಸಿ,
ಅವನಿದಿರಿಟ್ಟು ಆರಾಧಿಸಿ, ಅವರೆಂಜಲ ಭುಂಜಿಸಿ,
ತಮ್ಮ ಲಿಂಗಶರೀರಂಗಳ ಮೇಲೆ ಅವನು ಕಟ್ಟಿಕೊಂಡು,
ಮತ್ತೆ ತಾವು ಭಕ್ತರೆಂದು ಬಗಳುವ
ಪರ ಸಮಯದ್ರೋಹಿಗಳನಿರಿದಿರಿದು
ಕಿರಿಕಿರಿದಾಗಿ ಕೊಯಿದು ಕೆನ್ನಾಯಿಗಿಕ್ಕದೆ ಮಾಣ್ಬರೆ?
ಇಂತಪ್ಪ ನರಕಜೀವಿಗಳನು ಕೂಡಲಚೆನ್ನಸಂಗಯ್ಯ
ರವಿಸೋಮರುಳ್ಳನ್ನಕ್ಕ ನಾಯಕ ನರಕದಲ್ಲಿಕ್ಕುವ.