Index   ವಚನ - 1183    Search  
 
ಗುರುಜಂಗಮದ ಪಾದತೀರ್ಥವು ಲಿಂಗಾಭಿಷೇಕಕ್ಕೆ ಸಲ್ಲದೆಂಬ ಮಂದಮತಿಗಳು ನೀವು ಕೇಳಿರೊ. ಮಂತ್ರಸಂಸ್ಕಾರದಿಂದ ಜಡಶಿಲೆ ಲಿಂಗವಾಗುತ್ತಿರ್ಪುದೆಂಬಿರಿ, ಆ ಮಂತ್ರಸಂಸ್ಕಾರದಿಂದ ಶಿವಾಂಶಿಕನಾದ ಮನುಷ್ಯನು ಶಿವಜ್ಞಾನಸಂಪನ್ನನಾಗಿ ಗುರುವಾಗನೆ? ಮತ್ತೆ ಜಂಗಮವಾಗನೆ? ಹೇಳಿರೆ. ಸಂಸ್ಕಾರದಿಂದಾದ ಲಿಂಗಕ್ಕೆ ಸಂಸ್ಕಾರವಿಲ್ಲದ ಮನುಷ್ಯನ ಪಾದಜಲವು ಸಲ್ಲದೆಂದಡೆ ಅದು ಸಹಜವೆಂಬೆನು. ಸಂಸ್ಕಾರ ವಿಶಿಷ್ಟವಾದ ಲಿಂಗಕ್ಕೆಯೂ, ಜಂಗಮಕ್ಕೆಯೂ ಅಭೇದವೆಂಬುದನು ಆಗಮೋಕ್ತಿ `ಪದೋದಾದಭಿಷೇಚನಂ' ಎಂದು ಸಾರುತ್ತಿಹುದು ಕಾಣಿರೊ! ಇದು ಕಾರಣ- ಅಂತಪ್ಪ ಗುರುಜಂಗಮದ ಪಾದತೀರ್ಥವು ಅಯೋಗ್ಯವೆಂದಡೆ ನಮ್ಮ ಕೂಡಲಚೆನ್ನಸಂಗಯ್ಯನ ವಚನವ ನಿರಾಕರಿಸಿದಂತಕ್ಕು ಕಾಣಿರೊ.