ಗುರು ಗುರುವೆಂದೇನೊ, ಪರಕ್ಕೆ ಹೆಸರ ಹೇಳುವನ್ನಕ್ಕವೆ?
ಲಿಂಗ ಲಿಂಗವೆಂದೇನೊ, ಅಂಗ ಬೀಳುವನ್ನಕ್ಕವೆ?
ಜಂಗಮ ಜಂಗಮವೆಂದೇನೊ,
ಧನವ ಸವೆವನ್ನಕ್ಕವೆ?
ಪ್ರಸಾದ ಪ್ರಸಾದವೆಂದೇನೊ,
ಉಂಡು ಕಳಚಿ ಪ್ರಳಯಕ್ಕೊಳಗಾಗುವನ್ನಕ್ಕವೆ?
ಪಾದತೀರ್ಥ ಪಾದತೀರ್ಥವೆಂದೇನೊ,
ಕೊಂಡು ಕೊಂಡು ಮುಂದೆ ಜಲವ ಮಾಡುವನ್ನಕ್ಕವೆ?
ಅಲ್ಲಿ ನಿಂದಿರದಿರಾ ಮನವೆ!
ನಿಂದಡೆ ನೀನು ಕೆಡುವೆ ಬಂದಡೆ ನಾನು ಕೆಡುವೆ.
ಎನ್ನ ತಂದೆ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ
ಪ್ರಭುದೇವರು ತೋರಿದರೀಯನುವ.