Index   ವಚನ - 1240    Search  
 
ಜಂಗಮಪ್ರಸಾದವ ಲಿಂಗಕ್ಕೆ ಸಲಿಸಬಾರದೆಂಬ ಮಾತ ಕೇಳಲಾಗದು. ಪ್ರಸಾದವೆ ಲಿಂಗ, ಆ ಲಿಂಗವೆ ಅಂಗ, ಆ ಜಂಗಮವೆ ಚೈತನ್ಯ, ಆ ಚೈತನ್ಯವೆ ಪ್ರಸಾದ. ಇಂತೀ ಉಭಯದ ಬೇಧವನರಿಯರು ನೋಡಾ! ಜಿಹ್ವೆಯಲ್ಲಿ ಉಂಡ ರಸ ಸರ್ವೇಂದ್ರಿಯಕ್ಕೆ ಬೇರೆಯಾಗಬಲ್ಲುದೆ? ಪ್ರಾಣಲಿಂಗದಲ್ಲಿ ಸವಿದು ಭಾವಲಿಂಗದಲ್ಲಿ ತೃಪ್ತಿಯಾದ ಬಳಿಕ ಇಷ್ಟಲಿಂಗಕ್ಕೆ ಭಿನ್ನವುಂಟೆ? ಇದನರಿದು ಅರ್ಪಿಸಿ ಸುಖಿಸಲೊಲ್ಲರು. ದೇಹಭಾವದಲ್ಲಿ ಕೊಂಬುದು ಅನರ್ಪಿತವೆಂದರಿಯರು. ಲಿಂಗಕ್ಕೂ ಭಕ್ತಂಗೂ ಭೇದವಿಲ್ಲೆಂಬುದನರಿಯಲರಿಯರು. ಜಂಗಮಮುಖದಿಂದೊಗೆದುದು ಪ್ರಸನ್ನಪ್ರಸಾದವೆಂದರಿಯರು. "ಸರ್ವೇಂದ್ರಿಯಮುಖದ್ವಾರೇ ಸದಾ ಸನ್ನಿಹಿತಃ ಶಿವಃ ಪ್ರಾಣೇ ಲಿಂಗಸ್ಥಿತಿಂ ಮತ್ವಾ ಯೋ ಭುಂಕ್ತೇ ಲಿಂಗವರ್ಜಿತಃ ಸಃ ಸ್ವಮಾಂಸಂ ಸ್ವರುಧಿರಂ ಸ್ವಮಲಂ ಭಕ್ಷಯತ್ಯಹೋ ತಸ್ಮಾಲ್ಲಿಂಗಪ್ರಸಾದಂ ಚ ನಿರ್ಮಾಲ್ಯಂ ತಜ್ಜಲಂ ತಥಾ ನೈವೇದ್ಯಂ ಚರಲಿಂಗಸ್ಯ ಶೃಣು ಷಣ್ಮುಖ ಸರ್ವದಾ" ಇದು ಕಾರಣ, ಪ್ರಸಾದವೆ ಇಷ್ಟ ಪ್ರಾಣ ಭಾವವಾಗಿ ನಿಂದುದನರಿಯರು. ಇಂತೀ ಮರ್ಮವ ನಮ್ಮ ಬಸವಣ್ಣ ಬಲ್ಲ. ಇದನೆಲ್ಲರಿಗೆ ತೋರಿ, ಲಕ್ಷದ ಮೇಲೆ ತೊಂಬತ್ತುಸಾವಿರ ಜಂಗಮದ ಒಕ್ಕುದನೆತ್ತಿಕೊಂಬ; ಅಚ್ಚಪ್ರಸಾದವ ಲಿಂಗಕ್ಕಿತ್ತುಕೊಂಬ. ಪ್ರಸಾದಿಗಳು ಮೂವತ್ತಿರ್ಛಾಸಿರದೊಳಗೆ ತಾನೊಬ್ಬನಾಗಿ ಸುಖಿಸುವುದ ನಾನು ಬಲ್ಲೆನಾಗಿ, ಸಂದೇಹವಳಿದು ಬದುಕಿದೆನಯ್ಯಾ ಕೂಡಲಚೆನ್ನಸಂಗಮದೇವಾ.