Index   ವಚನ - 1307    Search  
 
ದಾಯೆಂದಡೆ ನಡೆದು, ಹೋಯೆಂದಡೆ ನಿಲ್ಲನೆ ಜಗವ ಹೊರೆಯಲೆಂದು ಆತನ ಸಾಹಸವ ಬೆಸಗೊಂಬಡೆ ಈಶ್ವರನ ತಾಳುವನಯ್ಯಾ. ಆವರಿಸಿದಡಲ್ಲಾಡಿದತ್ತು ಕೈಲಾಸವು! ಗಂಡುಗೆದರಿ ಈಡಾಡಿದರೆ ಅಂಡಜ ಬ್ರಹ್ಮಾಂಡಗಳು ನಿಲುವವೆ? ಕೆಲೆದು ಕೆದರಿ ಅಟ್ಟಿದೊಡೆ ಮೊರೆಯೆಂಬರಲ್ಲದೆ ಇದಿರಾನುವರುಂಟೆ? ಅಯ್ಯಾ, ನೀನು ಬಿಟ್ಟು ಬೀದಿವರಿದೋಡೆ ಅಟ್ಟಿ ಹಿಡಿವ ಗಂಡುಗರ ನಾ ಕಾಣೆನಯ್ಯಾ. ಸೃಷ್ಟಿಗೀಶ್ವರನಲ್ಲದೆ ಮತ್ತಾರೂ ಇಲ್ಲ. ಗಂಭೀರವೆಂದಡೆ ಇಂಬುಗೊಳ್ವವೆ ಕೊಳಗು? ಶಂಭುವೇರುವ ವಾಹನವೆಂದೊಡೆ ಬೆನ್ನು ಬೆಂಕಟ್ಟಾಗದೆ? ಈ ಕೀಳು ಭುವನಕ್ಕೆ. ನಮ್ಮ ಕೂಡಲ[ಚೆನ್ನ]ಸಂಗಮದೇವನಲ್ಲಿ ತೆತ್ತೀಸಾದಿಗಳಿಗುಬ್ಬಸವಯ್ಯ ಎಮ್ಮ ಬಸವರಾಜನು.