Index   ವಚನ - 1312    Search  
 
ದೇವ ದೇವ ಮಹಾಪ್ರಸಾದ. ತನ್ನ ರೂಪವ ತಿಳಿದು ನೋಡಬೇಕೆಂದು ಕನ್ನಡಿಯನುಪಾಸ್ತಿ ಮಾಡಲು ಆ ಕನ್ನಡಿ ಬೇಕು ಬೇಡೆಂಬುದೆ ಅಯ್ಯಾ? ಪತಿಯಾಜ್ಞೆಯಂತೆ ಸತಿಪತಿಭಾವವ ಧರಿಸಿದಡೆ ಸಂಯೋಗಕಾಲದಲ್ಲಿ ಅಲ್ಲವೆಂದೆನಬಹುದೆ? ನೀವೆ ಮಾಡಿದಡೆ ನೀವೆ ಮಾಡಿದುದು, ನಾನೆ ಮಹಾಪ್ರಸಾದವೆಂದು ಸ್ವೀಕರಿಸಿದಡೂ ನೀವೆ ಮಾಡಿದುದು. ಅಂಗೈಯ ಲಿಂಗದ ಲಕ್ಷಣವ ನೋಡಿ ಎಂದು ಕೈಯಲ್ಲಿ ಕೊಟ್ಟಡೆ, ಲಿಂಗದಲ್ಲಿ ಲಕ್ಷಣವನರಸಲಾಗದೆಂದು ಚೆನ್ನಸಂಗಮನಾಥನ `ಕೋ' ಎಂದು ಕೊಟ್ಟಡೆ, ಮಹಾಪ್ರಸಾದವೆಂದು ಕೈಕೊಂಡೆನು ಗುರುವೆ. ಬೆದರಿ ಅಂಜಿದಡೆ ಮನವ ಸಂತೈಸಿ ಏಕಾರ್ಥವ ಭೇದದ ತೋರಿ ಬಿನ್ನಹವ ಮಾಡಿದೆನು. ಕೂಡಲಚೆನ್ನಸಂಗಮದೇವರ ಮಹಾಮನೆಯ ಗಣಂಗಳು ಮೆಚ್ಚಲು, ಸಂಗನಬಸವಣ್ಣನ ಕರುಣದ ಶಿಶುವೆಂಬುದ ಮೂರುಲೋಕವೆಲ್ಲವು ಅಂದು ಜಯ ಜಯ ಎನುತಿರ್ದುದು.