Index   ವಚನ - 1320    Search  
 
ನದಿ ಕೂಪ ತಟಾಕ ಜಲಾಶಯದಲ್ಲಿ ಅಗ್ಗಣಿಯ ತಂದು ಮಜ್ಜನಕ್ಕೆ ನೀಡುವರೆಲ್ಲ ಶೀಲವಂತರೆ? ಪಾಕದಲ್ಲಿ ಪರಪಾಕ ಭವಿಪಾಕ ಎಂಬವರೆಲ್ಲ ಶೀಲವಂತರೆ? ತಳಿಗೆ ಬಟ್ಟಲ ಪ್ರಗಾಳಿಸಿ ನೇಮವ ಮಾಡಿಕೊಂಬವರೆಲ್ಲ ಶೀಲವಂತರೆ? ಕಂಠಪಾವಡ, ಧೂಳಿಪಾವಡ, ಸರ್ವಾಂಗಪಾವಡವೆಂಬವರೆಲ್ಲ ಶೀಲವಂತರೆ? ಅದೇನು ಕಾರಣವೆಂದಡೆ; ಅವರು `ಸಂಕಲ್ಪಂ ಚ ವಿಕಲ್ಪಂ ಚ' ಎಂದುದಾಗಿ, ಶುದ್ಧಭವಿಗಳು. ಭವಿಯೆಂಬವನೆ ಶ್ವಪಚ, ವ್ರತಸ್ಥನೆಂಬವನೆ ಸಮ್ಮಗಾರ. ಶೀಲವಿನ್ನಾವುದೆಂದಡೆ: ಅಶನ ಅರತು, ವ್ಯಸನ ನಿಂದು, ವ್ಯಾಪ್ತಿಯಳಿದು, ಅಷ್ಟಮದವೆಲ್ಲ ನಷ್ಟವಾದಲ್ಲದೆ, ಕೂಡಲಚೆನ್ನಸಂಗಮದೇವರಲ್ಲಿ ಶೀಲವಿಲ್ಲ ಕಾಣಿರೊ.