Index   ವಚನ - 1326    Search  
 
ನರರು ಸುರರು ನವಕೋಟಿ ಯುಗಗಳ ಪ್ರಳಯಕ್ಕೆ ಒಳಗಾಗಿ ಹೋದರು, ಒಳಗಾಗಿ ಹೋಹಲ್ಲಿ ಸುರಪತಿಗೆ ಪರಮಾಯು ನೋಡಿರೆ! ಅಂಥ ಸುರಪತಿ ನವಕೋಟಿ ಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ, ಚಿಟ್ಟಜನೆಂಬ ಋಷಿಗೆ ಒಂದು ಚಿಟ್ಟು ಸಡಿಲಿತ್ತು ನೋಡಿರೆ! ಅಂಥ ಚಿಟ್ಟನೆಂಬ ಋಷಿ ನವಕೋಟಿಯುಗಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಚಿಪ್ಪಜನೆಂಬ ಋಷಿಗೆ ಒಂದು ಚಿಪ್ಪು ಸಡಿಲಿತ್ತು ನೋಡಿರೆ! ಅಂಥ ಚಿಪ್ಪಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಡೊಂಕಜನೆಂಬ ಋಷಿಗೆ ಒಂದು ಡೊಂಕು ಸಡಿಲಿತ್ತು ನೋಡಿರೆ! ಅಂಥ ಡೊಂಕಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ರೋಮಜನೆಂಬ ಋಷಿಗೆ ಒಂದು ರೋಮ ಸಡಿಲಿತ್ತು ನೋಡಿರೆ! ಅಂಥ ರೋಮಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಆದಿಬ್ರಹ್ಮಂಗೆ ಆಯುಷ್ಯವು ನೂರಾಯಿತ್ತು ನೋಡಿರೆ! ಅಂಥ ಆದಿಬ್ರಹ್ಮ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಆದಿನಾರಾಯಣಂಗೆ ಒಂದು ದಿನವಾಯಿತ್ತು ನೋಡಿರೆ! ಅಂಥ ಆದಿ ನಾರಾಯಣ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ರುದ್ರಂಗೆ ಕಣ್ಣೆವೆ ಹಳಚಿತ್ತು ನೋಡಿರೆ! ಅಂಥ ರುದ್ರರು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಫಣಿಮುಖರೊಂದು ಕೋಟಿ, ಪಂಚಮುಖರೊಂದು ಕೋಟಿ, ಷಣ್ಮಮುಖರೊಂದು ಕೋಟಿ, ಸಪ್ತಮುಖರೊಂದು ಕೋಟಿ ಅಷ್ಟಮೂಖರೊಂದು ಕೋಟಿ, ನವಮುಖರೊಂದು ಕೋಟಿ ದಶಮುಖರೊಂದು ಕೋಟಿ- ಇಂತಿವರೆಲ್ಲರ ಕೀರೀಟದಾಭರಣಂಗಳು ಬಿದ್ದವು ನೋಡಿರೆ! ಅಂಥ ಸಪ್ತಕೋಟಿಗಳು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ನಂದಿವಾಹನರೊಂದು ಕೋಟಿ, ಭೃಂಗಿ ಪ್ರಿಯರೊಂದು ಕೋಟಿ ಚಂದ್ರಪ್ರಿಯರೊಂದು ಕೋಟಿ- ಇಂತೀ ತ್ರಿಕೋಟಿಗಳ ತಲೆಗಳು ಬಾಗಿದವು ನೋಡಿರೆ! ಅಂಥ ತ್ರಿಕೋಟಿಗಳ ತಲೆಗಳು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಕೂಡಲಚೆನ್ನಸಂಗಯ್ಯಾ ನಮ್ಮ ಬಸವಣ್ಣನೀ ಸುದ್ದಿಯನೇನೆಂದುವರಿಯನು.