Index   ವಚನ - 1327    Search  
 
ನರಸುರಾದಿಗಳೆಲ್ಲರು ನಿಮ್ಮ ಹೊರೆಯೊಳಗಿದ್ದರು, ಮನು ಮುನಿ ಯತಿ ವ್ರತಿಗಳೆಲ್ಲರು ನಿಮ್ಮ ತೋಹಿನೊಳಗಿದ್ದರು. ಗಂಗೆವಾಳುಕರೆಲ್ಲರು ನಿಮ್ಮ ಮಡಿಯೊಳಗಿದ್ದರು. ಗಂಗೆ ಗೌರೀವಲ್ಲಭರೆಲ್ಲರು, ಚತುರ್ಮುಖ, ಪಂಚಮುಖ, ಷಣ್ಮಖ, ದಶಮುಖರೆಲ್ಲರು ನಿಮ್ಮ ಮಡಿಯ ಗಳಿಗೆಯೊಳಗಿದ್ದರು. ಲೋಕಾದಿ ಲೋಕವೆಲ್ಲವು ನಿಮ್ಮ ಕುಕ್ಷಿಯೊಳಗು. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ, ನಿಮ್ಮ ನಿರಾಳದ ಪ್ರಸಾದದಿಂದ ನಿರವಯಲ ಹಾದಿಯ ಕಂಡೆನಲ್ಲದೆ, ನಿಮ್ಮಿಂದಲಾನು ಘನವೆ ಮಡಿವಾಳ ಮಾಚಯ್ಯಾ.