Index   ವಚನ - 1349    Search  
 
ನಿಷ್ಠೆ ನಿಬ್ಬೆರಗು ಗಟ್ಟಿಗೊಂಡಡೆ ಏಕೋಭಾವದಲ್ಲಿ ಸೊಮ್ಮು ಸಂಬಂಧ. ಆಹ್ವಾನ ವಿಸರ್ಜನ ದುರ್ಭಾವಬುದ್ಧಿ ಲಯವಾದಡೆ, ಆತ ಮಾಹೇಶ್ವರ. ಗುರುಮುಖದಲ್ಲಿ ಸರ್ವಶುದ್ಧನಾಗಿ ಪಂಚಭೂತದ ಹಂಗಡಗಿದಡೆ ಆತ ಮಾಹೇಶ್ವರ. ಪರದೈವ ಮಾನವಸೇವೆ ಪರಸ್ತ್ರೀ ಪರಧನವ ಬಿಟ್ಟು ಏಕಲಿಂಗನಿಷ್ಠಾಪರನಾಗಿ, "ದಾಸತ್ವಂ ವೀರದಾಸತ್ವಂ ಭೃತ್ಯತ್ವಂ ವೀರಭೃತ್ಯತಾ| ಸಮಯಃ ಸಕಲಾವಸ್ಥಃ ಸಜ್ಜನಃ ಷಡ್ವಿಧಸ್ತಥಾ"|| ಎಂಬ ಶ್ರುತ್ಯರ್ಥದಲ್ಲಿ ನಿಹಿತನಾಗಬಲ್ಲಡೆ ಆತ ಮಾಹೇಶ್ವರನಪ್ಪನಯ್ಯಾ. ಗುರುಮಾರ್ಗವೆ ತನಗೆ ಸನ್ಮತವಾಗಿ ಇರಬಲ್ಲಡೆ ಆತ ಮಾಹೇಶ್ವರ. ಈ ಮತವನರಿಯದ ಮೂಕೊರೆಯರ ಮೆಚ್ಚುವನೆ ಕೂಡಲಚೆನ್ನಸಂಗಮದೇವ.