Index   ವಚನ - 1357    Search  
 
ನೋಡದ ಮುನ್ನವೆ, ನೋಡಿದ ಬಳಿಕ ಅರ್ಪಿತವೇ? ಕೇಳದ ಮುನ್ನವೆ, ಕೇಳಿದ ಬಳಿಕ ಅರ್ಪಿತವೇ? ಘ್ರಾಣಿಸದ ಮುನ್ನವೆ, ಘ್ರಾಣಿಸಿದ ಬಳಿಕ ಅರ್ಪಿತವೇ? ರುಚಿ ನಿಶ್ಚಯಿಸದ ಮುನ್ನವೆ, ರುಚಿ ನಿಶ್ಚಿಯಿಸಿದ ಬಳಿಕ ಅರ್ಪಿತವೇ? ಸಕಲಸುಖಂಗಳಪ್ಪದ ಮುನ್ನವೆ, ಸಕಲಸುಖಂಗಳಪ್ಪಿದ ಬಳಿಕ ಅರ್ಪಿತವೇ? ಶಿವಶಿವಾ,ಅರ್ಪಿಸುವ ಪರಿಯಿನ್ನೆಂತು ಹೇಳಾ. ಕಾಯದ ಕೈಮುಟ್ಟಿ ಬಂದುದು ಲಿಂಗಾರ್ಪಿತವಲ್ಲ, ಜೀವದ ಕೈಮುಟ್ಟಿ ಬಂದುದು ಲಿಂಗಾರ್ಪಿತವಲ್ಲ, ಭಾವದ ಕೈಮುಟ್ಟಿ ಬಂದುದು ಲಿಂಗಾರ್ಪಿತವಲ್ಲ, ಅವಧಾನದ ಕೈಮುಟ್ಟಿ ಬಂದುದು ಲಿಂಗಾರ್ಪಿತವಲ್ಲ, ಸಕಲದ ಕೈಮುಟ್ಟಿ ಬಂದುದು ಲಿಂಗಾರ್ಪಿತವಲ್ಲ, ಅದೇನು ಕಾರಣವೆಂದಡೆ: ಕಾಯವ ಮುಟ್ಟಿ ಬಂದುದು ಕಾಯಮುಖದಲ್ಲಿ ನಿಂ[ದುದು]. ಭಾವ ಮುಟ್ಟಿ ಬಂದುದು ಭಾವದ ಮುಖದಲ್ಲಿ ನಿಂ[ದುದು]. ಅವಧಾನದ ಮುಖದಲ್ಲಿ ಬಂದುದು, ಅವಧಾನದ ಮುಖದಲ್ಲಿ ನಿಂ[ದುದು]. ಸಕಲದ ಕೈಮುಟ್ಟಿ ಬಂದುದು ಸಕಲ ಮುಖದಲ್ಲಿ ನಿಂ[ದುದು]. [ಪದಾ]ರ್ಥದ ಪೂರ್ವಾಶ್ರಯವ ಕಳೆದು ಲಿಂಗಕ್ಕೆ ಕೊಟ್ಟು ಪ್ರಸಾದವ ಮಾಡುವ ಪರಿಯಿನ್ನೆಂತು? ಲಿಂಗ ಮುಟ್ಟದ ಮುನ್ನವೆ… ಲಿಂಗಪ್ರಸಾದಿಯಾಗಿ ಶ್ರುತಿ: ”ಸರ್ಪದಷ್ಟಸ್ಯ ಯದ್ದೇಹಂ ವಿಷದೇಹವತ್| ಲಿಂಗದಷ್ಟಸ್ಯ ತದ್ದೇಹಂ ಲಿಂಗದೇಹವತ್”|| ಇಂತೆಂದುದಾಗಿ ಲಿಂಗಕ್ಕೆ ತೆನೆಗೆ ತೆರಹಿಲ್ಲದಿಪ್ಪ, ಲಿಂಗಸಹಿತಾಗಿಯೇ ನೋಡುವ [ಲಿಂಗ ನೇತ್ರದಲ್ಲಿ], ಲಿಂಗಸಹಿತಾಗಿಯೇ ಘ್ರಾಣಿಸುವ ಲಿಂಗ ಘ್ರಾಣದಲ್ಲಿ, ಲಿಂಗಸಹಿತಾಗಿಯೇ ರುಚಿಸುವ ಲಿಂಗಜಿಹ್ವೆಯಲ್ಲಿ, ಲಿಂಗಸಹಿತಾಗಿಯೇ ಸಕಲಸುಖಂಗಳನ್ನಪ್ಪುವ ಲಿಂಗಾಂಗದಲ್ಲಿ, ಶ್ರುತಿ: ”ದೃಷ್ಟಾದೃಷ್ಟ ಶ್ರುತಾಶ್ರುತ್ವ ಘ್ರಾಣಾಘ್ರಾಣಮೇವ ಚ| ಸ್ಪರ್ಶನಾ ಸ್ಪರ್ಶನಂ ವಿದ್ಯಾಗ್ರಾಹ್ಯಮೇವ ಚ| ಭೂತ್ವ ತದ್ಭೂತ್ವಮಾಖ್ಯತೆ…………..ಕಂ || ಪ್ರಾಣಮಾಖ್ಯಾತಂ ಇತ್ಯೇತಿ ಸಹವರ್ತತೇ”| ಎಂದುದಾಗಿ, ತನ್ನೊಳಗೆ ಲಿಂಗ, ಲಿಂಗದೊಳಗೆ ತಾನು, ಆ…………………..ತ್ಮಕ ಅದೇ ನಿರಂತರ ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗಳು.