Index   ವಚನ - 1375    Search  
 
ಪರಶಿವನು ಗುರುಜಂಗಮರೂಪಿಂದ ನರರನುದ್ಧರಿಸಲೆಂದು ಸಜಾತೀಯವಾದ ಮನುಜಾಕಾರವ ಧರಿಸಿ ಧರೆಗವತರಿಸಿರ್ಪನಯ್ಯಾ. ಇದನರಿಯದ ಮಂದಮತಿಗಳು ಆ ಗುರುಜಂಗಮವನಾರಾಧಿಸಿ ಭಕ್ತರಾಗದೆ, ವಿಜಾತೀಯವಾದ ಕಲ್ಲು ಕಟ್ಟಿಗೆ ಮಣ್ಣು ಮುಂತಾಗಿ ಹೊರಗಿನ ಜಡಾಕಾರವೆ ದೈವವೆಂದಾರಾಧಿಸಿ, ಮೊರಡಿಯಿಂದೊಸರುವ ನೀರ ತೀರ್ಥವೆಂದು ಸೇವಿಸಿ ಭವಭಾರಿಗಳಾಗುತ್ತಿಪ್ಪರಯ್ಯಾ "ತೀರ್ಥೇ ದಾನೇ ಜಪೇ ಯಜ್ಞೇ ಕಾಷ್ಠೇ ಪಾಷಾಣಕೇ ಸದಾ| ಶಿವಂ ಪಶ್ಯತಿ ಮೂಢಾತ್ಮಾ ಶಿವೇ ದೇಹೇ ಪ್ರತಿಷ್ಠಿತೇ"|| ಎಂದುದಾಗಿ ನಮ್ಮ ಕೂಡಲಚೆನ್ನಸಂಗಯ್ಯನ ವಚನವನಾರಯ್ಯದೆ ಕೆಡುತಿಪ್ಪರಯ್ಯಾ.