Index   ವಚನ - 1380    Search  
 
ಪಶ್ಚಿಮಪದ್ಮಾಸನದಲ್ಲಿ ಕುಳ್ಳಿರ್ದು, ನಿಟ್ಟೆಲುವ ನೆಟ್ಟನೆ ಮಾಡಿ, ಅಧೋಮುಖ ಕಮಲವ ಬಲಿದು, ಊರ್ಧ್ವಮುಖವ ಮಾಡಿ, ಇಂದ್ರಿಯಂಗಳನು ಏಕಮುಖವ ಮಾಡಿ, ಚಂದ್ರ ಸೂರ್ಯರನೊಂದೆ ಠಾವಿನಲ್ಲಿರಿಸಿ ಅತ್ತಿತ್ತ ಮಿಸುಕದೆ ನಡುನೀರ ಜ್ಯೋತಿಯ ದೃಢವಾಗಿ ಹಿಡಿದು, ಪರಮಾನಂದದ ಮಠದೊಳಗೆ, ಪ್ರಾಣಲಿಂಗಾರ್ಚನೆಯ ಮಾಡುವ ಮಹಾಮಹಿಮರ ತೋರಿ ಬದುಕಿಸಾ, ಕೂಡಲಚೆನ್ನಸಂಗಯ್ಯಾ.