Index   ವಚನ - 1395    Search  
 
ಪೃಥ್ವಿಯಿಂದ ಈಶ್ವರ ಪರಿಯಂತ ಪಂಚವಿಂಶತಿ ತತ್ವಂಗಳುತ್ಪತ್ಯ, ಈಶ್ವರಾದಿ ಪರಶಿವ ಪರಿಯಂತ ಶಿವತತ್ತ್ವದುತ್ಪತ್ಯ. ದೇವತಾದಿಗೆ ಜಗದಾದಿಗೆ ಪೃಥ್ವಿಯಾದಿಗೆ ಪಂಚವಿಂಶತಿತತ್ತ್ವಂಗಳುತ್ಪತ್ಯಮಂ ಪೇಳ್ವೆ: ಪಂಚಶತಕೋಟಿ [ವಿಸ್ತೀರ್ಣ] ಭೂಮಂಡಲವಳಯದಲ್ಲಿ ಮೇರುಮಂದಿರದ ವಿಸ್ತೀರ್ಣ ಒಂದುಕೋಟಿ ಇಪ್ಪತ್ತಾರುಲಕ್ಷದ ಮೇಲೆ ಎಂಬತ್ತೈದುಸಾವಿರ ಯೋಜನ ಪ್ರಮಾಣು. ಆ ಮೇರುಮಂದಿರದ ಮೇಲೆ ಬ್ರಹ್ಮ ವಿಷ್ಣು ರುದ್ರ ಸದಾಶಿವ ನಂದಿ ಮಹಾಕಾಳ ವೀರಭದ್ರ ಅಷ್ಟಾಶೀತಿಸಹಸ್ರ ಋಷಿಯರು, ಅಸಂಖ್ಯಾತ ಮಹಾಗಣಂಗಳು, ದ್ವಾದಶಾದಿತ್ಯರು, ನಾರದಯೋಗೀಶ್ವರರು, ಅಷ್ಟದಿಕ್ಪಾಲಕರು ಏಕಾದಶ ರುದ್ರರು ಮುಖ್ಯವಾಗಿ ಶಿವಸುಖಸಂತೋಷದಿಂ ರಾಜ್ಯಂಗೆಯ್ವರು. ಆ ಮೇರುಮಂದಿರದ ಕೆಳಗಣ ಜಂಬೂದ್ವೀಪದ ವಿಸ್ತೀರ್ಣ ಲಕ್ಷದಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. ಅಲ್ಲಿಂದ ಮುಂದೆ, ಲವಣಸಮುದ್ರ ಲಕ್ಷದಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. ಆ ಲವಣಸಮುದ್ರದಿಂದಾಚೆಯಲ್ಲಿ ಭೂಮಿ ಎರಡುಲಕ್ಷದ ಮೇಲೆ ಐವತ್ತುಸಾವಿರ ಯೋಜನಪ್ರಮಾಣು. ಆ ದ್ವೀಪದ ಹೆಸರು ಪ್ಲಕ್ಷದ್ವೀಪ. ಪ್ಲಕ್ಷದ್ವೀಪಕ್ಕೆ ಇಕ್ಷುರಸಮುದ್ರ ಎರಡುಲಕ್ಷ ಐವತ್ತುಸಾವಿರ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ ಐದುಲಕ್ಷ ಯೋಜನಪ್ರಮಾಣು. ಆ ದ್ವೀಪದ ಹೆಸರು ಶಾಲ್ಮಲಿದ್ವೀಪ. ಶಾಲ್ಮಲಿದ್ವೀಪಕ್ಕೆ ಮಧುಸಮುದ್ರ, ಐದುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ, ಹತ್ತುಲಕ್ಷ ಯೋಜನಪ್ರಮಾಣು. ಆ ದ್ವೀಪಕ್ಕೆ ಹೆಸರು ಕುಶದ್ವೀಪ. ಕುಶದ್ವೀಪಕ್ಕೆ ಘೃತಸಮುದ್ರ. ಹತ್ತುಲಕ್ಷ ಯೋಜನಪ್ರಮಾಣು. ಅಲ್ಲಿಂದತ್ತ ಭೂಮಿ, ಇಪ್ಪತ್ತೈದು ಲಕ್ಷ ಯೋಜನಪ್ರಮಾಣು. ಆ ದ್ವೀಪದ ಹೆಸರು ಶಾಕದ್ವೀಪ. ಶಾಕದ್ವೀಪಕ್ಕೆ ದಧಿಸಮುದ್ರ. ನಾಲ್ವತ್ತುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ ನಾಲ್ವತ್ತುಲಕ್ಷ ಯೋಜನಪ್ರಮಾಣು. ಆ ದ್ವೀಪದ ಹೆಸರು ಕ್ರೌಂಚದ್ವೀಪ. ಕ್ರೌಂಚದ್ವೀಪಕ್ಕೆ ಕ್ಷೀರಸಮುದ್ರ, ನಾಲ್ವತ್ತುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ, ಎಂಬತ್ತುಲಕ್ಷ ಯೋಜನಪ್ರಮಾಣು. ಆ ದ್ವೀಪದ ಹೆಸರು ಪುಷ್ಕರದ್ವೀಪ. ಪುಷ್ಕರದ್ವೀಪಕ್ಕೆ ಸ್ವಾದೋದಕಸಮುದ್ರ ಎಂಬತ್ತುಲಕ್ಷ ಯೋಜನಪ್ರಮಾಣು, ಅಲ್ಲಿಂದತ್ತತ್ತ ಲೋಕಾಲೋಕ ಪರ್ವತಾಕಾರವಾಗಿಪ್ಪುದು. ಇಂತೀ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಪ್ರಮಾಣವೊಂದಾಗಿ ಮೇಳೈಸಿದಡೆ ಮೂರುಕೋಟಿಯುಂ ಹದಿನೇಳುಲಕ್ಷದೈವತ್ತುಸಹಸ್ರ ಯೋಜನ ಪರಿಮಾಣಿನ ಕಟ್ಟಳೆಯಾಯಿತ್ತು. ಮತ್ತಲ್ಲಿಂದ ಭೂಮಂಡಲ ಉಂಟೆ? ಎಂದೊಡೆ, ಉಂಟು: ನಾನೂರುಕೋಟಿಯೋಜನ ಹೇಮೋರ್ವಿ. ಅಲ್ಲಿಂದತ್ತ ಭೂಮಂಡಲ ಉಂಟೆ? ಎಂದೊಡೆ ಉಂಟು: ಹತ್ತುಕೋಟಿ ಇಪ್ಪತ್ತುಲಕ್ಷ ಯೋಜನಪ್ರಮಾಣು, ಹೇಮದ ಬೆಟ್ಟ. ಮತ್ತಲ್ಲಿಂದತ್ತಲೂ ಭೂಮಂಡಲ ಉಂಟೆ? ಎಂದಡೆ, ಉಂಟು: ಎಂಬತ್ತೈದುಕೋಟಿ ಮೂವತ್ತೈದುಲಕ್ಷದ ಅರುವತ್ತೈದುಸಾವಿರ ಯೋಜನ ಪರಿಮಾಣ ವಳಯದಲ್ಲಿಅಂಧಕಾರವಾಗಿ, ಸೂರ್ಯಚಂದ್ರರ ಬೆಳಗಿಲ್ಲ. ಇಂತಿವನೆಲ್ಲವನೊಂದಾಗಿ ಮೇಳೈಸಿದಡೆ ಐನೂರುಕೋಟಿ ಯೋಜನ ಪರಿಪ್ರಮಾಣು ಕಟ್ಟಳೆಯಾಗಿತ್ತು. ಆ ಮೇರುವಿನ ಒಂದು ದಿಕ್ಕಿನ ಪ್ರಮಾಣು: ಆ ಮೇರುವಿನ ಪ್ರದಕ್ಷಿಣವಾಗಿ ಎಂಟು ದಳದಲ್ಲಿಎಂಟು ಪಂಚಶತಕೋಟಿ [ಯೋಜನ] ವಿಸ್ತೀರ್ಣವಾಯಿತ್ತು. ಇದನು ದಿವಸದೊಳಗೆ ಸೂರ್ಯ ತಿರುಗುವನು, ರಾತ್ರಿಯೊಳಗೆ ಚಂದ್ರ ತಿರುಗುವನು, ಇಪ್ಪತ್ತೇಳು ನಕ್ಷತ್ರ, ಧ್ರುವಮಂಡಲ, ಸಪ್ತಋಷಿಯರು, ರಾಹುಕೇತು, ನವಗ್ರಹ- ಇಂತಿವರೆಲ್ಲರು ಆ ಮೇರುಮಂದಿರದ ಹೊಸಪ್ರದಕ್ಷಿಣವಂ ದಿವಾರಾತ್ರಿಯಲ್ಲಿ ತಿರುಗಿ ಬಹರು. ಇವರೆಲ್ಲರ ಪ್ರಮಾಣವನು ಮಹಕ್ಕೆ ಮಹವಾಗಿಪ್ಪ ಶರಣಸ್ಥಲದವರು ಬಲ್ಲರು. ಪ್ರಭುದೇವರು ಸಿದ್ಧರಾಮದೇವರು ಸಾಮವೇದಿಗಳು, ಆದಿಲಿಂಗ ಅನಾದಿಶರಣ ಪೂರ್ವಾಚಾರಿ ಸಂಗನಬಸವಣ್ಣನು, ಕಟ್ಟಿದ ಕಟ್ಟಳೆಯೊಳಗೆ ಜ್ಯೋತಿಜ್ರ್ಞಾನದವರು. [ಇಂತೀ]ಕಾಲ ಜ್ಯೋತಿಷ ಗ್ರಹಣ ಸಂಕ್ರಮಣ ತಿಥಿ ವಾರ ನಕ್ಷತ್ರ ಯೋಗ ಕರಣ ಸಂವತ್ಸರ ಇವೆಲ್ಲವು ಕೂಡಲಚೆನ್ನಸಂಗನಲ್ಲಿ ಬಸವಣ್ಣ ಕಟ್ಟಿದ ಕಟ್ಟಳೆ.