ಪ್ರಥಮದಲ್ಲಿ ಸ್ಪರ್ಶವೆಂಬ
ಸ್ಪರ್ಶಗುಣದಿಂದ ಪಾದೋದಕ,
ದ್ವಿತೀಯದಲ್ಲಿ ಅಂಗಗುಣವಳಿಯಿತ್ತಾಗಿ
ಲಿಂಗಮುಖದಿಂದ ಬಂದುದು ಲಿಂಗೋದಕ,
ತೃತೀಯದಲ್ಲಿ ಮಹಾಗಣಂಗಳ
ಬರವಿನಿಂದ [ಬಂದುದಾಗಿ] ಮಜ್ಜನೋದಕ,
ಚತುರ್ಥದಲ್ಲಿ ಚತುರ್ದಳಪದ್ಮ
ವಿಕಸಿತವಾಗಿ ಪುಷ್ಪೋದಕ,
ಪಂಚಮದಲ್ಲಿ ಲಿಂಗಕ್ಕೆ ಪರಮ ಪರಿಣಾಮದಿ
ಇಕ್ಕುವಲ್ಲಿ ಅವಧಾನೋದಕ,
ಷಷ್ಠಮದಲ್ಲಿ ಲಿಂಗಾರೋಗಣೆಯ
ಅಪ್ಯಾಯನೋದಕ,
ಸಪ್ತಮದಲ್ಲಿ ಲಿಂಗಕ್ಕೆ ಹಸ್ತೋದಕ,
ಅಷ್ಟಮದಲ್ಲಿ ಅಷ್ಟಾಂಗಯೋಗ
ಪರಮಪರಿಣಾಮೋದಕ,
ನವಮದಲ್ಲಿ ನಾಮ ಸೀಮೆ ಇಲ್ಲವಾಗಿ
ನಿರ್ನಾಮೋದಕ,
ದಶಮದಲ್ಲಿ ಹೆಸರಿಲ್ಲವಾಗಿ ನಿತ್ಯೋದಕ,
ಇಂತು ದಶವಿಧೋದಕ.
ಇನ್ನು ಏಕಾದಶಪ್ರಸಾದ:
ಪ್ರಥಮದಲ್ಲಿ ಮಹಾದೇವಂಗೆ ಮನವರ್ಪಿತ,
ದ್ವಿತೀಯದಲ್ಲಿ ಮಾಹೇಶ್ವರಂಗೆ ವೀರಾರ್ಪಿತ,
ತೃತೀಯದಲ್ಲಿ ಶಂಕರಂಗೆ ಸಮಾಧಾನಾರ್ಪಿತ,
ಚತುರ್ಥದಲ್ಲಿ ನಿರ್ವಿಷಯಾರ್ಪಿತ,
ಪಂಚಮದಲ್ಲಿ ಪಂಚವಸ್ತ್ರಾರ್ಪಿತ,
ಷಷ್ಠಮದಲ್ಲಿ ನಷ್ಟರೂಪ ನಿರೂಪಾರ್ಪಿತ,
ಸಪ್ತಮದಲ್ಲಿ ಆತ್ಮಾರ್ಪಿತ,
ಅಷ್ಟಮದಲ್ಲಿ ತನ್ನ ಮರೆದ ಮರಹಾರ್ಪಿತ,
ನವಮದಲ್ಲಿ ಅಸಮಸಹಸ್ರನಾಳದಿಂದ ತೃಪ್ತ್ಯಾರ್ಪಿತ,
ದಶಮದಲ್ಲಿ ಚಿತ್ತಸುಯಿಧಾನಿಯಾಗಿ
ಸುಷುಮ್ನಾನಾಳದಿಂದ ಅಮೃತಾರ್ಪಿತ,
ಏಕಾದಶದಲ್ಲಿ ಏಕಪ್ರಸಾದ ನೋಡಹೋದರೆ
ತನ್ನ ನುಂಗಿತ್ತಯ್ಯಾ.
ಹೇಳಬಾರದ ಘನವು ಕಾಣಬಾರದಾಗಿ,
ಕೂಡಲಚೆನ್ನಸಂಗನಲ್ಲಿ ಉಪಮಿಸಬಾರದ
ಮಹಾಘನವು.
Art
Manuscript
Music
Courtesy:
Transliteration
Prathamadalli sparśavemba
sparśaguṇadinda pādōdaka,
dvitīyadalli aṅgaguṇavaḷiyittāgi
liṅgamukhadinda bandudu liṅgōdaka,
tr̥tīyadalli mahāgaṇaṅgaḷa
baravininda [bandudāgi] majjanōdaka,
caturthadalli caturdaḷapadma
vikasitavāgi puṣpōdaka,
pan̄camadalli liṅgakke parama pariṇāmadi
ikkuvalli avadhānōdaka,
ṣaṣṭhamadalli liṅgārōgaṇeya
apyāyanōdaka,
saptamadalli liṅgakke hastōdaka,
aṣṭamadalli aṣṭāṅgayōga
paramapariṇāmōdaka,
navamadalli nāma sīme illavāgi
Nirnāmōdaka,
daśamadalli hesarillavāgi nityōdaka,
intu daśavidhōdaka.
Innu ēkādaśaprasāda:
Prathamadalli mahādēvaṅge manavarpita,
dvitīyadalli māhēśvaraṅge vīrārpita,
tr̥tīyadalli śaṅkaraṅge samādhānārpita,
caturthadalli nirviṣayārpita,
pan̄camadalli pan̄cavastrārpita,
ṣaṣṭhamadalli naṣṭarūpa nirūpārpita,
saptamadalli ātmārpita,
aṣṭamadalli tanna mareda marahārpita,
Navamadalli asamasahasranāḷadinda tr̥ptyārpita,
daśamadalli cittasuyidhāniyāgi
suṣumnānāḷadinda amr̥tārpita,
ēkādaśadalli ēkaprasāda nōḍahōdare
tanna nuṅgittayyā.
Hēḷabārada ghanavu kāṇabāradāgi,
kūḍalacennasaṅganalli upamisabārada
mahāghanavu.