Index   ವಚನ - 1421    Search  
 
ಬಲ್ಲಿದ ಬಲ್ಲಿದರೆಂಬವರು ತಮ್ಮಿಂದ ತಾವಾದ ಸ್ವತಂತ್ರಶೀಲರೆ? ಅಲ್ಲ. ಬ್ರಹ್ಮ ಬಲ್ಲಿದನೆಂದಡೆ, ಶಿರ ಹೋಗಲದೇನು? ಹರಿ ಬಲ್ಲಿದನೆಂದಡೆ, ಹಲವು ಭವಕ್ಕೆ ಬರಲದೇನು? ಅಂಧಕಾಸುವ ಬಲ್ಲಿದನೆಂದಡೆ ಹರನ ಅಂಗಾಲ ಕೆಳಗೆ ಇರಲೇನು? ದಕ್ಷ ಬಲ್ಲಿದನೆಂದಡೆ, ಹೋಮಕ್ಕೆ ಗುರಿಯಾಗಲದೇನು? ಕೋಪಾಗ್ನಿರುದ್ರನೆಂಬ ಜಮದಗ್ನಿ ಬಲ್ಲಿದನೆಂದಡೆ ಆತನ ತಲೆಯನರಿಯಲದೇನು? ಪರಶುರಾಮ ಬಲ್ಲಿದನೆಂದಡೆ ತನ್ನ ಬಿಲ್ಲ ಬಿಟ್ಟು ಹೋಗಲದೇನು? ಸಹಸ್ರಾರ್ಜುನ ಬಲ್ಲಿದನೆಂದಡೆ ತೋಳು ತುಂಡಿಸಲದೇನು? ಅಂಬುಧಿ ಬಲ್ಲಿತ್ತೆಂದಡೆ, ಅಪೋಶನಕ್ಕೊಳಗಾಗಲದೇನು? ಅಗಸ್ತ್ಯ ಬಲ್ಲಿದನೆಂದಡೆ ಅರಣ್ಯದೊಳಗೆ ತಪವ ಮಾಡಲದೇನು? ನಳರಾಜ ಬಲ್ಲಿದನೆಂದಡೆ ತನ್ನ ಸತಿಯನಿಟ್ಟು ಹೋಗಲದೇನು? ಕೃಷ್ಣ ಬಲ್ಲಿದನೆಂದಡೆ, ಬೇಡನ ಅಂಬು ತಾಗಲದೇನು? ರವಿ ಶಶಿಗಳು ಬಲ್ಲಿದರೆಂದಡೆ, ರಾಹುಕೇತು ಗ್ರಹಿಸಲದೇನು? ಶ್ರೀರಾಮ ಬಲ್ಲಿದನೆಂದಡೆ, ತನ್ನ ಸತಿ ಕೋಳುಹೋಗಲದೇನು? ಪಾಂಡವರು ಬಲ್ಲಿದರೆಂದಡೆ, ತಮಗೆ ಹಳುವಟ್ಟು ಹೋಗಲದೇನು? ಹರಿಶ್ಚಂದ್ರ ಬಲ್ಲಿದನೆಂದಡೆ, ಸ್ಮಶಾನವ ಕಾಯಲದೇನು? ಹರನೆ ನೀ ಮಾಡಲಿಕೆ ರುದ್ರರು, ನೀ ಮಾಡಲಿಕೆ ದೇವರ್ಕಳು, ನೀ ಮಾಡಲಿಕೆ ಬಲ್ಲಿದರು, ನೀ ಮಾಡಲಿಕೆ ವೀರರು, ನೀ ಮಾಡಲಿಕೆ ಧೀರರು. ಅಮೂರ್ತಿ ಮೂರ್ತಿ, ನಿರಾಕಾರ, ನಿರ್ಮಾಯ. ಇಂತು ಬಲ್ಲಿದರೆಂಬವರ ಇನ್ನಾರುವ ಕಾಣೆ ನಿಮ್ಮ ತಪ್ಪಿಸಿ, ಕೂಡಲಚೆನ್ನಸಂಗಮದೇವಾ.