Index   ವಚನ - 1423    Search  
 
ಬಸವಣ್ಣನ ಶೃಂಗದಲ್ಲಿ ತುಂಬುರ ನಾರದರು, ಬಸವಣ್ಣನ ಲಲಾಟದಲ್ಲಿ ವೀರಗಣಂಗಳು, ಬಸವಣ್ಣನ ನಯನದಲ್ಲಿ ಸೂರ್ಯಚಂದ್ರರು, ಬಸವಣ್ಣನ ಕರ್ಣದಲ್ಲಿ ಗಂಗೆವಾಳು ಕಸಮರುದ್ರರು, ಬಸವಣ್ಣನ ನಾಸಿಕದಲ್ಲಿ ವಾಯು, ಬಸವಣ್ಣನ ದಂತದಲ್ಲಿ ಭೃಂಗೀಶ್ವರದೇವರು, ಬಸವಣ್ಣನ ಕೊರಳಲ್ಲಿ ಈರೇಳು ಭುವನಂಗಳು, ಬಸವಣ್ಣನ ಅಂಡದಲ್ಲಿ ಅಷ್ಟಷಷ್ಟಿ ತೀರ್ಥಂಗಳು, ಬಸವಣ್ಣನ ಬಲದೊಡೆಯಲ್ಲಿ ಅಜ, ಹರಿ, ಸರಸ್ವತಿ, ಪಂಚನದಿ, ಮಹಾಗಂಗೆ, ಬಸವಣ್ಣನ ಮಣಿಪಾದದಲ್ಲಿ ದೇವಲೋಕದ ದೇವಗಣಂಗಳು, ಬಸವಣ್ಣನ ಕಿರುಗೊಳಗಿನಲ್ಲಿ ಸಪ್ತಸಮುದ್ರಂಗಳು. ಈ ಸಪ್ತಸಮುದ್ರಂಗಳೊಳಗಿಹ ಸಕಲಪ್ರಾಣಿಗಳಿಗೆ ಸಂಕೀರ್ಣತೆಯಾದೀತೆಂದು, ಬಾಲದಂಡದಲೆತ್ತಿ ತಡಿಗೆ ಸೇರಿಸಿದನು ನಮ್ಮ ಬಸವಣ್ಣನು- ಇದು ಕಾರಣ, ನಾಗಲೋಕದ ನಾಗಗಣಂಗಳು ಕೊಂಬುದು ಬಸವಣ್ಣನ ಪ್ರಸಾದ. ಮರ್ತ್ಯಲೋಕದ ಮಹಾಗಣಂಗಳು ಕೊಂಬುದು ಬಸವಣ್ಣನ ಪ್ರಸಾದ. ದೇವಲೋಕದ ದೇವಗಣಂಗಳ ಕೊಂಬುದು ಬಸವಣ್ಣನ ಪ್ರಸಾದ. ರುದ್ರಲೋಕದ ರುದ್ರಗಣಂಗಳು ಕೊಂಬುದು ಬಸವಣ್ಣನ ಪ್ರಸಾದ- ಇಂತು ನಮ್ಮ ಬಸವಣ್ಣನ ಪ್ರಸಾದವನುಂಡುಟ್ಟು ಕೊಂಡು ಕೊಟ್ಟು ಅನ್ಯದೈವಂಗಳ ಹೊಗಳುವ ಕುನ್ನಿಗಳನೇನೆಂಬೆ ಕೂಡಲಚೆನ್ನಸಂಗಮದೇವಾ.