ಭಕ್ತಂಗೆ ಪೃಥ್ವಿಯೆ ಅಂಗ,
ಆ ಅಂಗಕ್ಕೆ ಸುಚಿತ್ತವೆ ಹಸ್ತ,
ಆ ಹಸ್ತಕ್ಕೆ ಕರ್ಮಸಾದಾಖ್ಯ,
ಆ ಸಾದಾಖ್ಯಕ್ಕೆ ಕ್ರಿಯಾಶಕ್ತಿ,
ಆ ಶಕ್ತಿಗೆ ಆಚಾರವೆ ಲಿಂಗ,
ಆ ಲಿಂಗಕ್ಕೆ ನಿವೃತ್ತಿಯೆ ಕಲೆ,
ಆ ಕಲೆಗೆ ಘ್ರಾಣೇಂದ್ರಿಯವೆ ಮುಖ,
ಆ ಮುಖಕ್ಕೆ ಸುಪರಿಮಳದ್ರವ್ಯಂಗಳನು
ರುಚಿತೃಪ್ತಿಯನರಿದು ಸದ್ಭಕ್ತಿಯಿಂದರ್ಪಿಸಿ,
ಸುಗಂಧಪ್ರಸಾದವ ಭೋಗಿಸಿ ಸುಖಿಸುತ್ತಿಹನು
ಕೂಡಲಚೆನ್ನಸಂಗಾ, ನಿಮ್ಮ ಭಕ್ತನು.