ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಭವಿಯ ಬಿಡಲೇಬೇಕು.
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ದುಸ್ಸಂಗ ಹಿಂಗಲೇಬೇಕು.
ತಟ್ಟುಮುಟ್ಟಿನ ಅರ್ಪಿತ ಆಯತವನರಿಯಬೇಕು,
ಲಿಂಗಪ್ರಸಾದವಲ್ಲದೆ ಬಾಯಿದೆರೆಯೆನೆಂದರೆ
ಜಿಹ್ವೆಯ ಕೊನೆಯ ಮೊನೆಯ ಮೇಲೆ
ರುಚಿಯನರಿಯದಂತಿರಬೇಕು
ಸಕಲಾಚಾರ ಸಂಪನ್ನರಲ್ಲದವರ ಮನೆಯಲ್ಲಿ
ಮಾಡಿದ ಬೋನ ಸೂಕರನ ಮಾಂಸಕ್ಕೆ ಸರಿಯೆಂದುದಾಗಿ
ಬಲ್ಲವರು ಅಂಗವಿಸಲಾರರು
ಕೂಡಲಚೆನ್ನಸಂಗಮದೇವಾ.