ವಚನ - 383     
 
ಸಟೆದಿಟವೆಂಬ ಎರಡುವಿಡಿದು ನಡೆವುದೀ ಲೋಕವೆಲ್ಲವು. ಸಟೆದಿಟವೆಂಬ ಎರಡುವಿಡಿದು ನುಡಿವುದೀ ಲೋಕವೆಲ್ಲವು. ಸಟೆದಿಟವೆಂಬ ಎರಡುವಿಡಿದು ನಡೆವನೆ ಶರಣನು? ಗುರುಲಿಂಗಜಂಗಮದಲ್ಲಿ ಸಟೆಯ ಬಳಸಿದಡೆ ಅವನು ತ್ರಿವಿಧಕ್ಕೆ ದ್ರೋಹಿ, ಅಘೋರ ನರಕಿ. ಉಂಬುದೆಲ್ಲ ಕಿಲ್ಬಿಷ, ತಿಂಬುದೆಲ್ಲ ಅಡಗು, ಕುಡಿವುದೆಲ್ಲ ಸುರೆ.ಹುಸಿಯೆಂಬುದೆ ಹೊಲೆ, ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯಾ? ಹುಸಿಯನಾಡಿ ಲಿಂಗವ ಪೂಜಿಸಿದಡೆ ಹೊಳ್ಳ ಬಿತ್ತಿ ಫಲವನರಸುವಂತೆ ಕಾಣಾ ಚೆನ್ನಮಲ್ಲಿಕಾರ್ಜುನಾ