Index   ವಚನ - 1512    Search  
 
ಮಹಾಜ್ಞಾನವು ಗುರುವಿನಲ್ಲಿ ಸಾಹಿತ್ಯ, ಸುಜ್ಞಾನವು ಶಿಷ್ಯನಲ್ಲಿ ಸಾಹಿತ್ಯ, ಜ್ಞಾನವು ಲಿಂಗದಲ್ಲಿ ಸಾಹಿತ್ಯ. ಇಂತೀ ಜ್ಞಾನವೂ ಸುಜ್ಞಾನವೂ ಮಹಾಜ್ಞಾನವೂ ಜಂಗಮದಲ್ಲಿ ಸಾಹಿತ್ಯವು. ಇದು ಕಾರಣವಾಗಿ, ಸಕಲ ಭೋಗಾಧಿಭೋಗಂಗಳೆಲ್ಲವನು ಜಂಗಮಕ್ಕೆ ಕೊಡದೆ ಲಿಂಗಕ್ಕೆ ಕೊಡಲಾಗದು. ಅದೇನು ಕಾರಣವೆಂದರೆ, ಸರ್ವಸುಖಂಗಳನು ಜಂಗಮಕ್ಕೆ ಅರ್ಪಿಸಿದಡೆ ಆ ಸುಖವ ಸುಖಿಸಬಲ್ಲನಾಗಿ ತನಗೆ ಪ್ರಸಾದವಾಯಿತ್ತು. ಲಿಂಗಕ್ಕೆ ಅರ್ಪಿಸಿದಡೆ ಆ ಸುಖವ ಸುಖಿಸಲರಿಯದಾಗಿ ತನಗೆ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ. ಅದು ಕಾರಣವಾಗಿ, ಜಂಗಮಕ್ಕೆ ಮಾಡದೆ ಲಿಂಗಕ್ಕೆ ಆರು ಮಾಡಿಹರು ಅಲ್ಲಿ ಲಿಂಗಕ್ಕೆ ತೃಪ್ತಿಯಿಲ್ಲ ಕಾಣಾ, ಕೂಡಲಚೆನ್ನಸಂಗಮದೇವಾ.