Index   ವಚನ - 1513    Search  
 
ಮಹಾಂತನ ಕೂಡಲದೇವರೆಂಬ ಪಾಷಂಡಿ ವೇಷಧಾರಿ ಉದರ [ಪೋಷಕ] ಮೂಳ ಹೊಲೆಯರನೇನೆಂಬೆನಯ್ಯಾ? ಮಹಾಂತನ ಪರಿ ಪ್ರಕಾರವನೇನೆಂದರಿನರಯ್ಯಾ. ಮಹಾಂತನೆಂದಡೆ ಪರಂಜ್ಯೋತಿ ಸ್ವರೂಪು, ನಿತ್ಯ ನಿರಂಜನನು, ನಿಃಕಳಂಕ ನಿರ್ದೇಹನು, ನಿಃಶೂನ್ಯ ನಿರಾಮಯನು, ಅನಂತ ಬ್ರಹ್ಮಾಂಡಗಳ ನೆನಹು ಮಾತ್ರದಲ್ಲಿ ಕರ್ತೃ. ಪಾದದಲ್ಲಿ ಪಾತಾಳಲೋಕ, ನೆತ್ತಿಯಲ್ಲಿ ಸತ್ಯಲೋಕ, ಕುಕ್ಷಿಯಲ್ಲಿ ಹದಿನಾಲ್ಕು ಲೋಕವ ತಾಳಿಹ ವಿಶ್ವಪರಿಪೂರ್ಣನು. ಇಂತಪ್ಪ ಪರಂಜ್ಯೋತಿ ಮಹಾಂತನ ತನ್ನ ಸರ್ವಾಂಗದೊಳಗಡಗಿಸಿಕೊಂಡು ನಿಬ್ಬೆರಗಿಯಾಗಿ ನಿಃಶೂನ್ಯ ನಿಃಶಬ್ದನಾಗಿ ಇರಬಲ್ಲಡೆ ಮಹಾಂತ ಕೂಡಲದೇವರೆಂಬೆ. ಇದನರಿಯದ ವೇಷಲಾಂಛನ ನರಕಿಗಳನೇನೆಂಬೆನಯ್ಯಾ ಕೂಡಲಚೆನ್ನಸಂಗಮದೇವರಲ್ಲಿ ಸಲ್ಲದ ನರಕಿಗಳರಿ.