Index   ವಚನ - 1520    Search  
 
ಮಾಣಿಕ್ಯದ ಮಂಟಪದೊಳಗೆ ಏಳು ಚಿತ್ರಕರೊಡನೆ ಮೇಳವಿಸಿದನು ಮಹಾಮಂತ್ರಂಗಳ. ಮೂಲಮಂತ್ರದ ಮೇಲೆ ಪ್ರಾಣಲಿಂಗದ ಬೆಳಗು! ವಾರಿಕಲ್ಲಲ್ಲಿ ವಜ್ರದ ಕೀಲು ಕೂಟ ಜಾಳಾಂಧರದೊಳಗೆ ಮಾಣಿಕ್ಯದ ಪ್ರತಿಬಿಂಬ ಏಳು ರತ್ನದ ಪುತ್ಥಳಿಗಳಾಟವು, ಮಣಿಮಾಲೆಗಳ ಹಾರ, ಹೊಳೆವ ಮುತ್ತಿನ ದಂಡೆ, ಎಳೆಯ ನೀಲದ ತೊಡಿಗೆಯನೆ ತೊಟ್ಟರು, ಸುಳಿದು ಮದ್ದಳೆಗಾರರೊಳು ದಂದಳಮೆನಲು ಕುಣಿವ [ಪಾಡುವ] ಬಹುರೂಪಿಗಳ ನಾಟಕ, ತಾಳಧಾರಿಯ ಮೇಳ, ಕಹಳೆಗಾರನ ನಾದ, ಕೊಳಲ ರವದೊಳಗಾಡುತ್ತ ಒಳಹೊರಗೆ ಕಾಣಬರುತ್ತದೆ ಚಿತ್ರದ ಬೊಂಬೆ! ಫಣಿಪತಿಯ ಕೋಣೆ ಸಂದಣಿಸುತ್ತಿರಲು ಗಣಮೇಳ ಕೂಡಲಚೆನ್ನಸಂಗಯ್ಯನಲ್ಲಿ ಕಳಾಸ ಪ್ರಾಣಲಿಂಗದ ಬೆಳಗಿನೊಳು ಬೆಳಗಿತ್ತು.