ಮೃದು ಕಠಿಣ ಶೀತ ಉಷ್ಣ ಸ್ಪರ್ಶನ
ಅಂಗಸೋಂಕೆಲ್ಲಾ ಲಿಂಗಸೋಂಕು.
ಅಂಗ ಲಿಂಗ ಸಂಬಂಧವಾದ ಬಳಿಕ
ಎನ್ನ ಘ್ರಾಣ ಜಿಹ್ವೆ
ನೇತ್ರ ತ್ವಕ್ಕು ಶ್ರೋತ್ರ ಮುಂತಾದ
ಪಂಚವಿಷಯದಲ್ಲಿ ತಟ್ಟುವ ಪಂಚದ್ರವ್ಯವೆಲ್ಲಕ್ಕೂ
ನೀನಲ್ಲದೆ ನಾನೆಂಬುದಿಲ್ಲ.
ಕೂಡಲಚೆನ್ನಸಂಗಯ್ಯಾ, ಎನ್ನಂಗಸೋಂಕೆಲ್ಲ,
ಶಬ್ದಸ್ಪರ್ಶರೂಪುರಸಂಗಂಧವೆಲ್ಲ
ನಿನ್ನ ಪೂಜೆಯಲ್ಲದೆ ಬೇರನ್ಯವಿಷಯ ಸೋಂಕಿಲ್ಲ.