Index   ವಚನ - 1545    Search  
 
ರುಂಡವ ಧರಿಸಿದಾತ ರುಂಡಾಭರಣನೆಂಬ ಗಣೇಶ್ವರನು. ಆಕಾಶವ ಧರಿಸಿದಾತ ಅಂಢಾಭರಣನೆಂಬ ಗಣೇಶ್ವರನು. ಭೂಮ್ಯಾಕಾಶವ ತಾಳವ ಮಾಡಿ ಒತ್ತಿದಾತ ಕ್ಷಿತಿವಿಯತ್ತಳನೆಂಬ ಗಣೇಶ್ವರನು. ಬ್ರಹ್ಮಾಂಡವ ಖಂಡಿಸಿದಾತ ಬ್ರಹ್ಮಾಂಡಖಂಡಿತನೆಂಬ ಗಣೇಶ್ವರನು. ತ್ರಿಪುರದಹನವ ಮಾಡಿದಾತ ಪಂಚವಿಕೃತನೆಂಬ ಗಣೇಶ್ವರನು. ಕಾಮದಹನವ ಮಾಡಿದಾತ ಅರ್ಧನಾರೀಶ್ವರನೆಂಬ ಗಣೇಶ್ವರನು. ಬಲ್ಲಾಳನ ವಧುವ ಬೇಡಿದಾತ ಮಹಾರುದ್ರನೆಂಬ ಗಣೇಶ್ವರನು. ಸಿರಿಯಾಳನ ಮಗನ ಭಿಕ್ಷವ ಬೇಡಿದಾತ ಬಹುಭಿಕ್ಷುಕನೆಂಬ ಗಣೇಶ್ವರನು. ಪರ್ವತಂಗಳ ಧರಿಸಿದಾತ ಪರ್ವತಾಭರಣನೆಂಬ ಗಣೇಶ್ವರನು. ಇಂತಿವರೆಲ್ಲರೂ ಕೂಡಲಚೆನ್ನಸಂಗಯ್ಯನ ಲೀಲೆಯ ತದರ್ಧಕರು.