ಲಿಂಗಕ್ಕೆ ಬೇರೆ ಭಾಜನ,
ತಮಗೆ ಬೇರೆ ಭಾಜನವೆಂದೆಂಬರು.
ನಾನಿದನರಿಯೆನಯ್ಯಾ.
ಅಂಗದ ಮೇಲೆ ಪ್ರಾಣ [ಲಿಂಗ?] ಪ್ರತಿಷ್ಠೆಯಾದ ಬಳಿಕ
ಲಿಂಗಕ್ಕೆಯೂ ತಮಗೆಯೂ ಏಕಭಾಜನವಿಲ್ಲದನ್ನಕ್ಕ
ಅಂಗದ ಕಳೆಯಲ್ಲಿ ಲಿಂಗವ ಧರಿಸಿಕೊಳಬಹುದೆ?
ಇದನರಿದು ಏಕಭಾಜನವಾಗದಿದ್ದಡಂತದು ದೋಷ
ಅರಿಯದೆ ಏಕಭಾಜನವಾದಡಿಂತು ದೋಷ.
ಈ ಕುಳಸ್ಥಳದ ಭೇದವ ಭೇದಿಸಬಲ್ಲ
ಕೂಡಲಚೆನ್ನಸಂಗಾ ನಿಮ್ಮ ಶರಣ.