Index   ವಚನ - 1566    Search  
 
ಲಿಂಗದ ಕಲೆ ಅಂತರಂಗಕ್ಕೆ ವೇದಿಸುವ ಹಲವು ಸಾಧನಂಗಳಲ್ಲಿ ಒಂದು ಸಾಧನವನಿಲ್ಲಿ ಹೇಳಿಹೆನು ಕೇಳಿರಯ್ಯಾ. ಕರದಿಷ್ಟಲಿಂಗದಿ ತೆರೆದಿಟ್ಟ ದೃಷ್ಟಿ ಎವೆ ಹಳಚದಂತಿರ್ದಡೆ ಆ ಲಿಂಗವು ಕಂಗಳಲ್ಲಿ ವ್ಯಾಪಿಸುತಿಪ್ಪುದು. ಆ ಮಂಗಲಮಯವಾದ ಕಂಗಳಲ್ಲಿ ಮನವಿರಿಸಿ, ಲಿಂಗನಿರೀಕ್ಷಣೆಯಿಂದ ನೆನೆಯಲು, ಆ ಲಿಂಗಮೂರ್ತಿ ಮನವನಿಂಬುಗೊಂಡು ಪ್ರಾಣಲಿಂಗವಾಗಿ ಪರಿಣಮಿಸುತಿಪ್ಪುದು. ಬಳಿಕ ಮನೋಮಯಲಿಂಗವನು ಭೇದವಿಲ್ಲದ ಸುವಿಚಾರದಿಂದ ಪರಿಭಾವಿಸಲು, ಆ ಲಿಂಗಮೂರ್ತಿ ಭಾವದಲ್ಲಿ ಸಮರಸಗೊಂಡು ಭಾವಲಿಂಗವಾಗಿ ಕಂಗೊಳಿಸುತಿಪ್ಪುದು. ಆ ಭಾವಲಿಂಗವನು ಎಡೆವಿಡದೆ ಭಾವಿಸುತ್ತ, ನೆನಹು ನಿರೀಕ್ಷಣೆಯಿಂದ ತಪ್ಪದಾಚರಿಸಲು, ಶರಣನು ನಿತ್ಯತೃಪ್ತನಾಗಿ ವಿರಾಜಿಸುತಿಪ್ಪನು. ಇದೇ ನಮ್ಮ ಕೂಡಲಚೆನ್ನಸಂಗಯ್ಯನೊಡನೆ ಕೂಡುವ ಪರಮೋಪಾಯವು.