Index   ವಚನ - 1650    Search  
 
ಶಿವಸಂಸ್ಕಾರಿಯಾಗಿ ಅಂಗದ ಮೇಲೆ ಲಿಂಗವ ಧರಿಸಿ, ಆ ಲಿಂಗವೆ ತನ್ನಂಗ ಮನ ಪ್ರಾಣದಲ್ಲಿ ಹಿಂಗದಿರ್ದುದ ಕಂಡು, ನಂಬಿ ಪೂಜಿಸಿ ಪ್ರಸಾದವ ಪಡೆದು ಲಿಂಗೈಕ್ಯರಾಗಲರಿಯದೆ, ತನ್ನಂಗಲಿಂಗಸಂಬಂಧಕ್ಕನ್ಯವಾದ, ಭವಿ ಶೈವದೈವಕ್ಕೆ ಎರಗುವ ಕುನ್ನಿಗಳಿಗೆ ಅಘೋರನರಕ. ಅದೆಂತೆಂದಡೆ: "ಇಷ್ಟಲಿಂಗಂ ಪರಿತ್ಯಜ್ಯ ಅನ್ಯಲಿಂಗಮುಪಾಸತೇ| ಪ್ರಸಾದಂ ನಿಷ್ಪಲಂ ಚೈವ ರೌರವಂ ನರಕಂ ವ್ರಜೇತ್"|| ಎಂದುದಾಗಿ, ಅಲ್ಲಲ್ಲಿ ಧರೆಯ ಮೇಲಿಪ್ಪ ಭವಿದೈವ ಸ್ಥಾವರಕ್ಕೆ ಹರಿಯಲಾಗದು. ಪ್ರಾಣಲಿಂಗಸಂಬಂಧಿಗೆ ಅದು ಪಥವಲ್ಲ. ತನ್ನ ಭವಿತನವ ಬಿಟ್ಟು ಭಕ್ತನಾದ ಬಳಿಕ ಆ ಭವವಿರಹಿತಲಿಂಗಕ್ಕೆ ಭವಿಪಾಕವ ನಿವೇದಿಸಿದರೆ ಅದು ಕಿಲ್ಬಿಷ, ಅದೆಂತೆಂದೊಡೆ: "ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ| ಶಿವಭಕ್ತಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ"|| ಎಂದುದಾಗಿ ತಾ ಶಿವಭಕ್ತನಾಗಿ ಭವಿಪಾಕ ಭವಿಪಂಥ ಭವಿಶೈವದೈವ, ಭವಿತಿಥಿಮಾಟಕೂಟ ಭವಿವರ್ತನಾಕ್ರೀಯನೊಡಗೂಡಿಕೊಂಡು ನಡೆದನಾದಡೆ, ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವ.