Index   ವಚನ - 1651    Search  
 
ಶಿವಸ್ವರೂಪವನರಿದು ಶಿವನೊಡನಾಡಿ ಶಿವನೊಡನುಂಡು ಶಿವಾಕಾರವಾದ ಶಿವಭಕ್ತನು ದೇವ ದಾನವ ಮಾನವಾದಿಗಳಲ್ಲಿರ್ದಡೇನು? ಆತನು ಹುಟ್ಟುಗೆಟ್ಟನಾಗಿ. ಆವ ಕುಲ ಜಾತಿಗಳಲ್ಲಿ ಹುಟ್ಟಿದಡೇನು? ಶಿವಜ್ಞಾನಸಿದ್ಧನಾದ ಶಿವಭಕ್ತನು ಸಾಧಕರಂತೆ ವರ್ಣಾಶ್ರಮದ ಅಭಿಮಾನಕ್ಕೊಳಗಪ್ಪನೆ? ಇಲ್ಲಿಲ್ಲ. "ಶಿವಭಕ್ತಾ ಮಹಾತ್ಮಾನಸ್ಸಂತಿ ದೇವೇಷು ಕೇಚನ ದೈತ್ಯೇಷು ಯಾತುಧಾನೇಷು ಯಕ್ಷಗಂಧರ್ವಭೋಗಿಷು ಮುನೀಶ್ವರೇಷು ಮೂರ್ತೇಷು ಬ್ರಾಹ್ಮಣೇಷು ನೃಪೇಷು ಚ ಊರುಜೇಷು ಚ ಶೂದ್ರೇಷು ಸಂಕರೇಷ್ವಪಿ ಸರ್ವಶಃ ವರ್ಣಾಶ್ರಮವ್ಯವಸ್ಥಾಶ್ಚ ನೈಷಾಂ ಸಂತಿ ಮುನೀಶ್ವರಾಃ ಕೇವಲಂ ಶಿವರೂಪಾಸ್ತೇ ಸರ್ವೇ ಮಾಹೇಶ್ವರಾಃ ಸ್ಮೃತಾಃ" ಎಂದುದಾಗಿ, ಹೇಯವಾದ ಮಾಯೆಯ ನಾಯಿಯಂತೆ ಅಳಿದುಳಿದು ಭಕ್ತನು ಮಾಹೇಶ್ವರನೆನಿಸಿಕೊಂಬನಾಗಿ, ಜಡ ಮಾಯಾಧರ್ಮವ ಹೊದ್ದಲಮ್ಮನು ಕಾಣಾ. ಕೂಡಲಚೆನ್ನಸಂಗಮದೇವಾ.