Index   ವಚನ - 1656    Search  
 
ಶೀಲವಂತರೆಲ್ಲ ಅಂತಿರಲಿ, ತಮ್ಮ ತಮ್ಮ ಮನದಿ ಮದವ ಕಳೆದು, ತಮ್ಮೊಳಗಿರ್ದ ಭವಿಗಳ ಭಕ್ತರ ಮಾಡಿ, ತಮ್ಮಲ್ಲಿರುವ ಅಷ್ಟಮದಂಗಳು ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು ಪಂಚಭೂತಂಗಳು, ಚತುಷ್ಕರಣಂಗಳು ತ್ರಿಕರಣಂಗಳು ತ್ರಿಗುಣಂಗಳು, ಶಿವಸಂಸ್ಕಾರದಿಂದ ಲಿಂಗಕರಣಂಗಳೆಂದೆನಿಸಿ, ನಿತ್ಯ ಲಿಂಗಾರ್ಚನೆಯ ಮಾಡಬಲ್ಲಾತನೆ ಶೀಲವಂತನಯ್ಯಾ. ಅವನ ಶ್ರೀಪಾದವನು ಹಸ್ತವನೆತ್ತಿ ಹೊಗಳುತಿರ್ದವು ವೇದಂಗಳು: "ಓಂ ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಭಿಮರ್ಶನಃ ಅಯಂ ಮಾತಾ ಅಯಂ ಪಿತಾ'' ಇಂತಪ್ಪ ಲಿಂಗದ ಅರ್ಚನೆಯ ಮಾಡಬಲ್ಲಾತನೆ ಸಂಬಂಧಿಯೆನಿಸಿಕೊಳ್ಳಬಲ್ಲನಯ್ಯಾ ಕೂಡಲಚೆನ್ನಸಂಗಮದೇವಾ.