Index   ವಚನ - 1655    Search  
 
ಶೀಲವಂತನಾದಲ್ಲದೆ ಶಿವಪ್ರಸಾದ ಸಾಧ್ಯವಾಗದೆಂಬುದಿಲ್ಲ ಕಂಡಯ್ಯ ಸತ್ತ ಕರುವ ಹೊತ್ತುಕೊಂಡು ದೃಷ್ಟವ ತೋರಿದುದಾವ ಶೀಲದೊಳಗು? ಅವುಟಕೋಟಿ ಭೂತಂಗಳನ್ನೆಲ್ಲ ಸಲ್ಲದ ಸಲ್ಲಿಸಿದ ಉದ್ಘಟಯ್ಯ ಅದಾವ ಶೀಲದೊಳಗು? ಡೊಂಬರ ಬಂಧು ಕಂಚೀಪುರವ ಕೈಲಾಸಕ್ಕೆ ಕೊಂಡೊಯ್ದುದಾವ ಶೀಲದೊಳಗು? ಅರವತ್ತು ಸಾವಿರ ರುದ್ರಾಕ್ಷಿ ಹಕ್ಕರಿಕೆ [ಯ] ಚೇರಮ ದೇವಲೋಕಕ್ಕೆ ಧಾಳಿವರಿದುದಾವ ಶೀಲದೊಳಗು? ಗಾಣದ ಕನ್ನಪ್ಪಯ್ಯಗಳು ಗಾಣವ ಹಾಕಿ, ಮೀನ ತಂದು ಮಾರಿ ಜಂಗಮಾರ್ಚನೆಯ ಮಾಡಿದುದಾವ ಶೀಲದೊಳಗು? ಹೆಂಡದ ಮಾರಯ್ಯಗಳು ಹೆಂಡವ ಮಾರಿ ಜಂಗಮಾರ್ಚನೆಯ ಮಾಡಿದುದಾವ ಶೀಲದೊಳಗು? ಕನ್ನದ ಬ್ಯಹ್ಮಯ್ಯಗಳು ಕನ್ನವನಿಕ್ಕಿ ತಂದು ಜಂಗಮಾರ್ಚನೆಯ ಮಾಡಿದುದಾವ ಶೀಲದೊಳಗು? ಹಾದರದ ಬೊಮ್ಮಯ್ಯಗಳು ಹಾದರವಮಾಡಿ ತಂದು ಜಂಗಮಾರ್ಚನೆಯ ಮಾಡಿದುದಾವ ಶೀಲದೊಳಗು? ಅಂಕದ ಮಾರಯ್ಯಗಳು ಅಂಕವ ಕಾದಿ ತಂದು ಜಂಗಮಾರ್ಚನೆಯ ಮಾಡಿದುದಾವ ಶೀಲದೊಳಗು? ಹಳ್ಳಯ್ಯಗಳು ಪಾದರಕ್ಷೆ [ಯ] ಮಾಡಿ ಜಂಗಮಾರ್ಚನೆಯ ಮಾಡಿದುದಾವ ಶೀಲದೊಳಗು? ಡೋಹರ ಕುಲದ ಕಕ್ಕಯ್ಯಗಳು ಜಂಗಮವಾದಲ್ಲಿ ಚರ್ಮದ ಕ[ಟಿ] ಸೂತ್ರದಾರ ಚರ್ಮದ ಯೋಗವಟ್ಟಿಗೆ ಚರ್ಮದ ವಿಭೂತಿಯಾಧಾರ ಚರ್ಮದ ಖಟ್ವಾಂಗ. ಸಂಗನಬಸವಣ್ಣ ಹನ್ನೆರಡು ವರುಷ ಪ್ರಸಾದಕ್ಕೆ ಕಾದಿದ್ದು ಪ್ರಸಾದದಿಂದ ಚೆನ್ನಬಸವಣ್ಣ ಹುಟ್ಟಿ[ದು] ದಾವ ಶೀಲದೊಳಗು? ತಾವು ಭಕ್ತರಾಗಿ ತಮ್ಮ ನಿಷ್ಠೆಯಿಲ್ಲದೆ ಸದ್ಭಕ್ತರನು ದೃಷ್ಟಜಂಗಮವನತಿಗಳೆವ ಭ್ರಷ್ಟಹೊಲೆಯರ ಮಾತಕೇಳಲಾಗದು ಕೂಡಲಚೆನ್ನಸಂಗಮದೇವ.